ಕಬ್ಬನ್ ಪಾರ್ಕ್‌ನ ಆಕರ್ಷಣೆಯಾಗಿದ್ದ ಪುಟಾಣಿ ಎಕ್ಸ್‌ಪ್ರೆಸ್ ಮತ್ತೊಮ್ಮೆ ನಿಮ್ಮನ್ನು ಸ್ವಾಗತಿಸಲಿದೆ!
ಲಕ್ಷಾಂತರ ಮಂದಿಯ ಬಾಲ್ಯದ ನೆನಪುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಪುಟಾಣಿ ಎಕ್ಸ್‌ಪ್ರೆಸ್, ಹಳಿಗಳಿಗೆ ಹಾನಿಯಾದ ಕಾರಣ ಜನವರಿ 2019 ರಲ್ಲಿ ಸ್ಥಗಿತಗೊಂಡಿತ್ತು.
ಬೆಂಗಳೂರು, ಫೆಬ್ರವರಿ. 28: ಉದ್ಯಾನನಗರಿ ಬೆಂಗಳೂರಿನ ಆಕರ್ಷಣೆಯ ತಾಣ ಕಬ್ಬನ್ ಪಾರ್ಕ್‌ನೊಳಗೊಂದು ಮಕ್ಕಳ ಪುಟ್ಟ ಪ್ರಪಂಚವಿದೆ. ಅದರಲ್ಲಿ ಹೆಚ್ಚು ಗಮನಸೆಳೆಯುತ್ತಿದ್ದದ್ದು ಪುಟಾಣಿ ರೈಲು. ಇದು ಬೆಂಗಳೂರಿನ ಮೊದಲ ಆಟಿಕೆ ರೈಲು ಕೂಡ. ಕಳೆದ ನಾಲ್ಕು ವರ್ಷಗಳಿಂದ ಓಟ ನಿಲ್ಲಿಸಿರುವ ರೈಲು ಮತ್ತೆ ಓಡಲು ಶುರು ಮಾಡುತ್ತಿದೆ.
ಹೌದು, ಕಬ್ಬನ್ ಪಾರ್ಕ್ ಒಳಗಿರುವ ಜವಾಹರ ಬಾಲಭವನದಲ್ಲಿನ ಪುಟಾಣಿ ಎಕ್ಸ್‌ಪ್ರೆಸ್ ಉದ್ಯಾನನಗರಿಯ ಆಕರ್ಷಣೆಯಾಗಿತ್ತು. ಲಕ್ಷಾಂತರ ಮಂದಿಯ ಬಾಲ್ಯದ ನೆನಪುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಆದರೆ, ಹಳಿಗಳಿಗೆ ಹಾನಿಯಾದ ಕಾರಣ ಜನವರಿ 2019 ರಲ್ಲಿ ಸ್ಥಗಿತಗೊಂಡಿತ್ತು. ಆದರೆ, ರೈಲ್ವೇ ಇಲಾಖೆ ಮತ್ತೆ ಇದರ ದುರಸ್ತಿ ಕೆಲಸ ಮಾಡುತ್ತಿದ್ದು, ರೈಲು ಮಾರ್ಚ್ 8 ರಿಂದ ಮತ್ತೊಮ್ಮೆ ಚಲಿಸಲಿದೆ.

ಪುಟಾಣಿ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 9, 1968 ರಂದು ಉದ್ಘಾಟಿಸಲಾಯಿತು. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಪತ್ನಿ ಶಾರದಾಭಾಯಿ ಪಾಟೀಲ್ ಮತ್ತು ಅಂದಿನ ಸಚಿವ ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ ಅವರು ಈ ಪಿಟ್ಟ ರೈಲಿಗೆ ಚಾಲನೆ ನೀಡಿದ್ದರು. ನಂತರ ಈ ರೈಲು ಬೆಂಗಳೂರು ಸೇರಿದಂತೆ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವ ಅದೆಷ್ಟೋ ಮಂದಿಯ ಬಾಲ್ಯದ ನೆನಪಾಗಿದೆ.
ಜೈವಿಕ ಇಂಧನದಲ್ಲಿ ಚಲಿಸುವ, ಚಿಕ್ಕ ಇಂಜಿನ್ ಇರುವ ಐದು ತೆರೆದ ಬೋಗಿಗಳ ಈ ಪುಟಾಣಿ ಎಕ್ಸ್‌ಪ್ರೆಸ್, ಮಕ್ಕಳು ಮತ್ತು ವಯಸ್ಕರಿಗೆ ವಿಶೇಷವಾಗಿತ್ತು. ಹಲವು ಬಣ್ಣಗಳಿಂದ ಅಲಂಕಾರ ಮಾಡುವ ಮೊದಲು ಬಹಳ ವರ್ಷಗಳಿಂದ ಹಸಿರು ಬಣ್ಣದಲ್ಲಿಯೇ ಇತ್ತು. 50 ವರ್ಷಗಳ ಕಾಲ ಮಕ್ಕಳು ಮತ್ತು ವಯಸ್ಕರನ್ನು ರಂಜಿಸುತ್ತಿದ್ದ ಪುಟಾಣಿ ಎಕ್ಸ್‌ಪ್ರೆಸ್‌ನ ಓಟವು ಜನವರಿ 2019 ರಲ್ಲಿ ಸ್ಥಗಿತಗೊಂಡಿತ್ತು.
"ಪುಟಾಣಿ ಎಕ್ಸ್‌ಪ್ರೆಸ್ ಹಳೆಯ ಬೆಂಗಳೂರಿನ ಒಂದು ಭಾಗವಾಗಿತ್ತು, ಇತರ ರಾಜ್ಯಗಳಿಂದ ಜನರು ಪುಟಾಣಿ ಎಕ್ಸ್‌ಪ್ರೆಸ್ ಸವಾರಿ ಮಾಡಲು ಬರುತ್ತಿದ್ದರು. ಯಾವುದೇ ದಿನ ಬಂದರೂ, ಜವಾಹರ್ ಬಾಲಭವನದಲ್ಲಿ ಉದ್ದನೇಯ ಸರತಿ ಸಾಲುಗಳು ಇರುತ್ತಿದ್ದವು. ಆಟಿಕೆ ರೈಲಿಬಲ್ಲಿ ಪ್ರಯಾಣ ಮಾಡಲು ಮಕ್ಕಳು ಮತ್ತು ವಯಸ್ಕರು ಕಾಯುತ್ತಿದ್ದರು" ಎಂದು ಬೆಂಗಳೂರಿನ ಕಲಾಕೃತಿಗಳ ಸಂಗ್ರಾಹಕ ಎನ್‌ಜೆ ರವಿ ಚಂದರ್ ನೆನಪಿಸಿಕೊಂಡಿದ್ದಾರೆ.

ಸುಮಾರು 50 ವರ್ಷಗಳ ಕಾಲ ಮಕ್ಕಳು ಮತ್ತು ವಯಸ್ಕರನ್ನು ರಂಜಿಸುತ್ತಿದ್ದ ಪುಟಾಣಿ ಎಕ್ಸ್‌ಪ್ರೆಸ್‌ನ ಓಟ ಜನವರಿ 2019 ರಲ್ಲಿ ಸ್ಥಗಿತಗೊಂಡಿತ್ತು. ರೈಲು ಹಳಿಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಬಳಿಕ ರೈಲು ಓಡಿಸುವುದು ಅಪಾಯಕಾರಿ ಎಂಬ ಅಂಶದಿಂದ ಹಾಗೆ ನಿಲ್ಲಿಸಲಾಗಿತ್ತು. ಇದರ ನಡುವೆಯೇ ಕೊರೊನಾ ಸಾಂಕ್ರಾಮಿಕ ರೋಗ ಹಳಿ ದುರಸ್ತಿ ಕೆಲಸಕ್ಕೆ ವಿಳಂಬ ಮಾಡಿದ್ದವು.
*ರೈಲ್ವೆಯಿಂದ ದುರಸ್ತಿ ಕಾರ್ಯಗಳು*
ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಕಾಮಗಾರಿಯಿಂದ ಬಾಲಭವನದ ಅಭಿವೃದ್ಧಿ ಕಾರ್ಯವು ಪ್ರಾರಂಭವಾಯಿತು. ಇದರಿಂದಲೇ ಪುಟಾಣಿ ರೈಲಿಗೂ ಮತ್ತೆ ಓಡುವ ಭಾಗ್ಯ ದೊರೆತಿದೆ. ಹಳಿಗಳು ಮತ್ತು ರೈಲಿಗೆ ತುರ್ತು ದುರಸ್ತಿ ಅಗತ್ಯವಿದೆ ಎಂದು ಅರಿತುಕೊಂಡ ಬಿಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಕೆ, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.
"ವರ್ಷಗಳಿಂದ ಸವೆತಕ್ಕೆ ಒಳಗಾಗಿರುವ, ಬಿರುಕುಗಳು ಕಾಣಿಸಿಕೊಂಡಿರುವ ಹಳಿಗಳ ಸುರಸ್ತಿ ಕೆಲಸವನ್ನು ಫೆಬ್ರವರಿ 14 ರಿಂದ ಪ್ರಾರಂಭಿಸಿದ್ದೇವೆ. 900 ಮೀಟರ್ ಟ್ರ್ಯಾಕ್ ಶನಿವಾರದೊಳಗೆ ಸಿದ್ಧವಾಗಬೇಕು. ನಂತರ ನಾವು ಇಂಜಿನ್‌ನಿಂದ ಮೂರು ಗಾಡಿಗಳೊಂದಿಗೆ ಪ್ರಾಯೋಗಿಕ ರನ್ ನಡೆಸುತ್ತೇವೆ. ಸಣ್ಣ ಬಣ್ಣದ ಕೆಲಸಗಳನ್ನು ಹೊರತುಪಡಿಸಿದರೇ ಪುಟಾಣಿ ಎಕ್ಸ್‌ಪ್ರೆಸ್ ಉತ್ತಮ ಸ್ಥಿತಿಯಲ್ಲಿದೆ" ಎಂದು ಎಸ್‌ಡಬ್ಲ್ಯೂಆರ್‌ನ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಮಾರ್ಚ್ 8 ರಂದು ಪುಟಾಣಿ ಎಕ್ಸ್‌ಪ್ರೆಸ್ ಮರು ಉದ್ಘಾಟನೆಯಾಗಲಿದೆ.
(ಮಾಹಿತಿ ಕೃಪೆ- ಟೈಮ್ಸ್ ಆಫ್ ಇಂಡಿಯಾ)












Click it and Unblock the Notifications