ಈಶ್ವರಪ್ಪ ಹೇಳಿಕೆ ವಿರುದ್ಧ ಭುಗಿಲೆದ್ದ ಪ್ರತಿಭಟನೆಯ ಬೆಂಕಿ
ಬೆಂಗಳೂರು, ಅಕ್ಟೋಬರ್ 17 : ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೀಡಿರುವ ಒಂದು ಅಸಂಬದ್ಧ, ಬೇಜವಾಬ್ದಾರಿ ಹೇಳಿಕೆ, ಹತ್ಯೆಯಾದ ಪಿಎಸ್ಐ ಜಗದೀಶ್ ಸುದ್ದಿಯನ್ನೇ ಹೈಜಾಕ್ ಮಾಡಿದೆ.
"ನಿನ್ನನ್ನು ಯಾವನೋ ಎಳೆದ್ಕೊಂಡು ಹೋಗಿ ರೇಪ್ ಮಾಡಿದ್ರೆ ನಾ ಏನ್ ಮಾಡೋಕಾಗುತ್ತೆ? ನಾನು ಎಲ್ಲೋ ಇರ್ತೀನಿ, ಎಲ್ಲದಕ್ಕೂ ಪ್ರತಿಭಟಿಸೋಕಾಗುತ್ತಾ?" ಎಂದು ಮಹಿಳಾ ಪತ್ರಿಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಈಶ್ವರಪ್ಪ ನಾಚಿಕೆಗೇಡಿನ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಶ್ವರಪ್ಪ ಹೇಳಿಕೆ ವಿರುದ್ಧ ಸಣ್ಣಮಟ್ಟದ ಪ್ರತಿಭಟನೆಗಳು ನಡೆಯುತ್ತಿದ್ದರೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಈಶ್ವರಪ್ಪ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಬೆಂಗಳೂರು ವರದಿಗಾರರ ಕೂಟ ಕೂಡ ಈಶ್ವರಪ್ಪ ಅವರ ಧೋರಣೆಯನ್ನು ಖಂಡಿಸಿದೆ. [ಯಾವನೋ ರೇಪ್ ಮಾಡಿದ್ರೆ ನಾ ಏನ್ ಮಾಡಕಾಗುತ್ತೆ]

ನುಣುಚಿಕೊಳ್ಳಲು ಯತ್ನಿಸಿದ ಸಿದ್ದರಾಮಯ್ಯ : ಈ ನಡುವೆ, ಈಶ್ವರಪ್ಪ ಅವರ ಖಂಡನೀಯ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. "ಈ ವಿಷಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ, ಹ್ಯಾಗೆ ಪ್ರತಿಕ್ರಿಯೆ ನೀಡಲಿ?" ಅಂತ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಮಹಿಳೆ ಪತ್ರಕರ್ತೆಯೊಬ್ಬರ ವಿರುದ್ಧ ಇಂಥ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಲೇಬೇಕು ಎಂದು ಪತ್ರಕರ್ತರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದಾಗ, ಸಿದ್ದರಾಮಯ್ಯ ಅವರು, 'ಅವರು ಈ ರೀತಿ ಹೇಳಿದ್ದರೆ, ಅದು ಅತ್ಯಂತ ಬೇಜವಾಬ್ದಾರಿಯುತವಾದ ಹೇಳಿಕೆ, ಖಂಡನೀಯ' ಎಂದು ತಮ್ಮ ಎಂದಿನ ಶೈಲಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ವರದಿಗಾರರ ಕೂಟ : "ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಕೆಎಸ್ ಈಶ್ವರಪ್ಪ ಅವರು ನೀಡಿರುವ ಹೇಳಿಕೆ ಮಹಿಳಾ ಸಮುದಾಯವನ್ನು ಅವಮಾನಿಸಿದ್ದು, ಇದು ಸಂಸದೀಯ ಪಟುವೊಬ್ಬರಿಗೆ ಶೋಭೆ ತರುವ ಸಂಗತಿಯಲ್ಲ. ಮಾಜಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಈಶ್ವರಪ್ಪನಂಥವರಿಂದ ಇಂಥ ಹೇಳಿಕೆ ನಿರೀಕ್ಷಿಸಲಿಲ್ಲ" ಎಂದು ಬೆಂಗಳೂರು ವರದಿಗಾರರ ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಜನವಾದಿ ಮಹಿಳಾ ಸಂಘಟನೆ : "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೆಣ್ಣುಮಗುವನ್ನು ಓದಿಸಿ, ಹೆಣ್ಣುಮಗುವನ್ನು ಉಳಿಸಿ ಎಂದು ಕರೆನೀಡಿದ್ದು, ಈ ಘೋಷಣೆಯನ್ನು ಮೊದಲು ಅವರದ್ದೇ ಪಕ್ಷದ ರಾಜ್ಯ ಮುಖಂಡರಿಗೆ ಮನನ ಮಾಡಿಸಬೇಕು. ಇಂಥ ಹೇಳಿಕೆ ರಾಜ್ಯದ ಹೆಣ್ಣುಮಕ್ಕಳು ಸಹಿಸಲು ಸಾಧ್ಯವೇ ಇಲ್ಲ. ಈಶ್ವರಪ್ಪ ಕೂಡಲೆ ಕ್ಷಮೆ ಯಾಚಿಸಬೇಕು" ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
ಇದು ಮೊದಲೇನಲ್ಲ : ಕೆಎಸ್ ಈಶ್ವರಪ್ಪ ಅವರ ಬಾಯಿಯಿಂದ ಇಂಥ ಬೇಜವಾಬ್ದಾರಿ ಹೇಳಿಕೆ ಬಂದಿದ್ದು ಇದು ಮೊದಲೇನಲ್ಲ. ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣ ಮತ್ತಿತರ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದಾಗ, ಮಾತಿನ ಓಘದಲ್ಲಿ, 'ನಿನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ ಸುಮ್ಮನಿರುತ್ತಿದ್ದೆಯಾ ಜಾರ್ಜ್?' ಎಂದು ಪ್ರಶ್ನಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. [ಜಾರ್ಜ್ ಗೆ ಇಂಥ ಪ್ರಶ್ನೆ ಕೇಳಬಹುದಾ ಈಶ್ವರಪ್ಪನವರೆ?]












Click it and Unblock the Notifications