ಡಿಕೆಶಿ ಪರ ಪ್ರತಿಭಟನೆ : ಒಕ್ಕಲಿಗರ ವಿರೋಧಿ ಬಿಜೆಪಿ ಎಂಬ ಘೋಷಣೆ
Recommended Video
ಬೆಂಗಳೂರು, ಸೆಪ್ಟೆಂಬರ್ 11 : ಕನಕಪುರ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದೆ.
ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಸಾವಿರಾರು ಜನರು ಪಾಲ್ಗೊಂಡಿದ್ದಾರೆ.
ರಾಮನಗರ, ಚನ್ನಪಟ್ಟಣ, ಮೈಸೂರು, ಕನಕಪುರ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಜನರು ಪ್ರತಿಭಟನೆಗೆ ಆಗಮಿಸಿದ್ದಾರೆ. ಹಲವು ಕಾಂಗ್ರೆಸ್ ನಾಯಕರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ "ಒಕ್ಕಲಿಗ ವಿರೋಧಿ ಬಿಜೆಪಿ" ಎಂಬ ಕೂಗು ಮುಗಿಲುಮುಟ್ಟಿದೆ.
ಬೆಂಗಳೂರು ಮತ್ತು ರಾಮನಗರದ ಜನರು ಮಾತ್ರ ಬಂದಿಲ್ಲ. ಹಾಸನ, ವಿಜಯಪುರ, ಹುಬ್ಬಳ್ಳಿ-ಧಾರವಾಡದಿಂದಿ ಡಿ. ಕೆ. ಶಿವಕುಮಾರ್ ಬೆಂಬಲಿಸಲು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ.

ಕಾಂಗ್ರೆಸ್ ನಾಯಕರು ಭಾಗಿ
ವಿಶ್ವ ಒಕ್ಕಲಿಗರ ಒಕ್ಕೂಟದಡಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನ ಹಲವು ನಾಯಕರು ಪಾಲ್ಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ವಿ. ಎಸ್. ಉಗ್ರಪ್ಪ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ನಾಯಕರು ಇದ್ದಾರೆ.

ಒಕ್ಕಲಿಗರ ವಿರೋಧಿ ಬಿಜೆಪಿ
ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ "ಒಕ್ಕಲಿಗ ವಿರೋಧಿ ಬಿಜೆಪಿ" ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರು ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ನೆಚ್ಚಿನ ನಾಯಕ ಡಿ. ಕೆ. ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ.

5 ಸಾವಿರ ಜನರ ಆಗಮನ
ಡಿ. ಕೆ. ಶಿವಕುಮಾರ್ ತವರು ಕ್ಷೇತ್ರ ಕನಕಪುರದಿಂದ 5 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಬಸ್‌ಗಳಲ್ಲಿ ಜನರು ಬಂದಿದ್ದು, ರಾಮನಗರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಜನರು ಆಗಮಿಸಿದ್ದಾರೆ.

ಉಪ ಮುಖ್ಯಮಂತ್ರಿಗಳ ಮನವಿ
ಉಪ ಮುಖ್ಯಮಂತ್ರಿ ಮತ್ತು ಒಕ್ಕಲಿಗ ಸಮುದಾಯದ ನಾಯಕ ಡಾ. ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದು, "ಡಿ.ಕೆ. ಶಿವಕುಮಾರ್ ಬೆಂಬಲಿಗರು ಆಯೋಜಿಸಿರುವ ಪ್ರತಿಭಟನೆ ಶಾಂತಿಯುತವಾಗಿ, ಸಮಾಜದ ಮತ್ತು ಸಂವಿಧಾನದ ಚೌಕಟ್ಟಿನಲ್ಲಿರಲಿ. ಸ್ವತಃ ಡಿ.ಕೆ.ಶಿವಕುಮಾರ್ ಆಗ್ರಹಿಸಿರುವಂತೆ ಬೆಂಬಲಿಗರು ಕಾನೂನಿನ ಮೇಲೆ ಗೌರವವಿಟ್ಟು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದಾಗಿ ನಮ್ಮ ಮನವಿ" ಎಂದು ಹೇಳಿದ್ದಾರೆ.












Click it and Unblock the Notifications