ಮಡಿವಾಳ ಚೆಕ್ ಪೋಸ್ಟ್ ಬಳಿ ವೇಶ್ಯಾವಾಟಿಕೆ ದಂಧೆ; ಸಿಸಿಬಿ ಪೊಲೀಸರಿಂದ ಆರು ಮಂದಿ ವಿದೇಶಿ ಮಹಿಳೆಯರ ಬಂಧನ
ಬೆಂಗಳೂರು: ನಗರದ ಮಡಿವಾಳ ಚೆಕ್ ಪೋಸ್ಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಪುರುಷರನ್ನು ವೇಶ್ಯಾವಾಟಿಕೆಗೆ ಆಕರ್ಷಿಸುತ್ತಿದ್ದ ಆರೋಪದ ಮೇಲೆ ಆರು ಮಂದಿ ವಿದೇಶಿ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣಾ ಘಟಕದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮಹಿಳೆಯರು ಟಾಂಜಾನಿಯಾ ಮತ್ತು ಉಗಾಂಡಾ ದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಮಡಿವಾಳ ಚೆಕ್ ಪೋಸ್ಟ್ ಸಮೀಪದ ಫುಟ್‌ಪಾತ್ ಮೇಲೆ ವಿದೇಶಿ ಮಹಿಳೆಯರು ನಿಂತು, ದಾರಿಯಲ್ಲಿ ಹೋಗುವ ಪುರುಷರನ್ನು ವೇಶ್ಯಾವಾಟಿಕೆಗಾಗಿ ಪ್ರಚೋದಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾಖಲೆಗಳಿಲ್ಲದೆ ವಾಸ್ತವ್ಯ
ಪೊಲೀಸರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರ ಬಳಿ ಭಾರತದಲ್ಲಿ ಉಳಿಯಲು ಅಗತ್ಯವಿರುವ ಯಾವುದೇ ಅಧಿಕೃತ ಪಾಸ್‌ಪೋರ್ಟ್ ಅಥವಾ ವೀಸಾ ದಾಖಲೆಗಳು ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ ಭಾರತಕ್ಕೆ ಅವರು ಬಂದ ಉದ್ದೇಶ ಮತ್ತು ವಾಸ್ತವ್ಯದ ಬಗ್ಗೆಯೂ ಯಾವುದೇ ಉತ್ತರ ನೀಡಲು ಅವರು ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರು ಮಹಿಳೆಯರ ಪೈಕಿ ಮೂವರು ಟಾಂಜಾನಿಯಾ ಮತ್ತು ಉಳಿದ ಮೂವರು ಉಗಾಂಡಾ ದೇಶದ ಪ್ರಜೆಗಳಾಗಿದ್ದಾರೆ. ಇವರೆಲ್ಲರೂ 24ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಮತ್ತು ವೀಸಾ ನಿಯಮಗಳ ಉಲ್ಲಂಘನೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇವರ ಹಿಂದೆ ಯಾವುದಾದರೂ ದೊಡ್ಡ ಜಾಲ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿಸಿಬಿ ಪೊಲೀಸರ ವಿಚಾರಣೆಯ ಸಮಯದಲ್ಲಿ ತಮ್ಮ ಪಾಸ್‌ಪೋರ್ಟ್ ಮತ್ತು ವೀಸಾ ಬಗ್ಗೆ ಯಾವುದೇ ಮಾನ್ಯ ದಾಖಲೆ ಅಥವಾ ಸಮರ್ಪಕ ಮಾಹಿತಿಯನ್ನು ನೀಡಲು ಇವರು ವಿಫಲರಾದ ಹಿನ್ನೆಲೆ ಹೆಚ್ಚಿನ ಕಾನೂನು ಕ್ರಮಕ್ಕಾಗಿ ಪೊಲೀಸರು ಈ ಆರೂ ಮಹಿಳೆಯರನ್ನು ವರದಿ ಸಮೇತ ಕೋರಮಂಗಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಸದ್ಯ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಪ್ರಕ್ರಿಯೆಗಳಿಗಾಗಿ ಇವರನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ದಂಧೆ ಹೇಗೆ?
ಇಂತಹ ದಂಧೆಯಲ್ಲಿ ತೊಡಗುವವರು ಸಾಮಾನ್ಯವಾಗಿ ಪ್ರವಾಸಿ, ವ್ಯವಹಾರ ಅಥವಾ ವಿದ್ಯಾರ್ಥಿ ವೀಸಾಗಳ ಅಡಿಯಲ್ಲಿ ಭಾರತಕ್ಕೆ ಪ್ರವೇಶಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಸಾ ಅವಧಿ ಮುಗಿದ ನಂತರವೂ ಕಾನೂನುಬಾಹಿರವಾಗಿ ದೇಶದಲ್ಲೇ ಉಳಿದುಕೊಳ್ಳುವ ಇವರು, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಆರು ಮಂದಿ ಆರೋಪಿಗಳು ನಗರದ ಹೊರವಲಯದಲ್ಲಿ ಬಾಡಿಗೆ ಮನೆಗಳನ್ನು ಮಾಡಿಕೊಂಡು ವಾಸವಿದ್ದರು. ತಡರಾತ್ರಿಯ ಸಮಯದಲ್ಲಿ ನಗರಕ್ಕೆ ಪ್ರವೇಶಿಸಿ, ಸಾರ್ವಜನಿಕ ಸ್ಥಳಗಳಲ್ಲಿ ನಿಂತು ವೇಶ್ಯಾವಾಟಿಕೆಗಾಗಿ ಗ್ರಾಹಕರನ್ನು ಹುಡುಕುತ್ತಿದ್ದರು ಎಂಬುದು ಪೊಲೀಸ್ ವಿಚಾರಣೆಯಿಂದ ಬಯಲಾಗಿದೆ.












Click it and Unblock the Notifications