ಮೆಟ್ರೋ ಕಾಮಗಾರಿ, ಚಿಕ್ಕಪೇಟೆಯಲ್ಲಿ ಜನರ ಸ್ಥಳಾಂತರ
ಬೆಂಗಳೂರು, ಆ.22 : ನಮ್ಮ ಮೆಟ್ರೋದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಚಿಕ್ಕಪೇಟೆ ಬಳಿ ಬಿರುಸಿನಿಂದ ನಡೆಯುತ್ತಿದೆ. ಈ ಕಾಮಗಾರಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಪೇಟೆಯ ಮಟನ್ ಮಾರ್ಕೆಟ್ ಬಳಿ ವಸತಿ ಗೃಹಗಳು ಸೇರಿದಂತೆ ಕೆಲವು ಕಟ್ಟಡಗಳಿಂದ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಇಂಜಿನಿಯರ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನೆಲ ಮಟ್ಟದಿಂದ 60 ಅಡಿಗಳಷ್ಟು ತಳಭಾಗದಲ್ಲಿ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಸುರಂಗ ಕೊರೆಯುವಾಗ ಮೇಲ್ಭಾಗದಲ್ಲಿರುವ ಹಳೆ ಮತ್ತು ಶಿಥಿಲ ಕಟ್ಟಡಗಳಿಗೆ ಹಾನಿಯಾಗಬಾರದು ಎಂದು ಮುಂಜಾಗ್ರತೆ ವಹಿಸಲಾಗಿದೆ. ಆದ್ದರಿಂದ ಕೆಲವು ಕಟ್ಟಡಗಳಿಂದ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಎರಡು ವಾರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಇಂಜಿನಿಯರ್ ತಿಳಿಸಿದರು. [ಬೆಂಗಳೂರಿಗೆ ಬಂತು 50ನೇ ಮೆಟ್ರೋ ರೈಲು]
ಸುರಂಗ ಮಾರ್ಗ ಕಾಮಗಾರಿ ನಡೆಯುವ ಜಾಗದ ಮೇಲ್ಭಾಗದಲ್ಲಿ 10ರಿಂದ 15 ಚದರ ಮೀಟರ್‌ಗಳಷ್ಟು ವಿಸ್ತೀರ್ಣದ ಜಾಗವನ್ನು ಪ್ರಭಾವ ವಲಯ ಎಂದು ಗುರುತಿಸಲಾಗುತ್ತದೆ. ಆ ವಲಯದಲ್ಲಿ ಬರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಂತಹ ಕಟ್ಟಡಗಳಿಂದ ಮಾತ್ರ ಜನರನ್ನು ಸ್ಥಳಾಂತರಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. [ಮೆಟ್ರೋ ರೈಲಿನಲ್ಲಿ ಪುನೀತ್ ರಾಜ್ 'ರಣವಿಕ್ರಮ']
ಸುರಂಗ ನಿರ್ಮಿಸುವಾಗ ಕಟ್ಟಡಗಳಿಗೆ ಹಾನಿ ಆದರೆ ಅವುಗಳನ್ನು ಗುತ್ತಿಗೆದಾರರು ದುರಸ್ತಿ ಮಾಡಿಸಿಕೊಡುತ್ತಾರೆ. ಸುರಂಗ ನಿರ್ಮಾಣ ಆದಂತೆಲ್ಲ ಟಿಬಿಎಂ ಮುಂದೆ ಸಾಗುತ್ತದೆ. ನಂತರ ಕಟ್ಟಡಗಳನ್ನು ಅವುಗಳ ಮಾಲೀಕರ ಮರು ವಶಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications