Property: ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಆಸ್ತಿಗಳ ಕುರಿತು ಆಯುಕ್ತರು ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 18: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಎಷ್ಟು ಆಸ್ತಿಗಳು ಬರಲಿವೆ ಎಂಬುದನ್ನು ಗುರುತಿಸಬೇಕು. ಅನಂತರ ಎಲ್ಲಾ ಆಸ್ತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸಂರಕ್ಷಣೆ ಮಾಡುವ ಕೆಲಸ ಮಾಡಲು ಆಯುಕ್ತರಾದ ರಾಜೇಂದ್ರ ಚೊಳನ್ ರವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು,ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಯಾವುದೇ ಇಲಾಖೆಗಾಗಲಿ ರಸ್ತೆ ಅಗೆತಕ್ಕೆ ಅನುಮತಿ ನೀಡದಂತೆ ಹಾಗೂ ಪ್ರಸ್ತುತ ನಡೆಯುತ್ತಿರುವ ಎಲ್ಲಾ ರಸ್ತೆ ಅಗೆತ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆಯುಕ್ತರಾದ ರಾಜೇಂದ್ರ ಚೊಳನ್ ರವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಇನ್ನಿತರೆ ಇಲಾಖೆಗಳವರು ರಸ್ತೆಗಳನ್ನು ಅಗೆದು ಅವರ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಅಗೆದಿರುವ ರಸ್ತೆಗಳನ್ನು ದುರಸ್ಥಿ ಕಾರ್ಯ ನಡೆಸಿರುವುದಿಲ್ಲ. ಈಗಾಗಲೇ ಈ ಇಲಾಖೆಗಳು ರಸ್ತೆ ಅಗೆದಿರುವ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚುವವರೆಗೆ ಆ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ನಿಲ್ಲಿಸುವುದರ ಜೊತೆಗೆ ಹೊಸದಾಗಿ ಯಾವುದೇ ಇಲಾಖೆಗೂ ರಸ್ತೆ ಅಗೆತಕ್ಕೆ ಅನುಮತಿ ನೀಡದಿರಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರ ಪಾಲಿಕೆ ವತಿಯಿಂದ ರಸ್ತೆ ಅಭಿವೃದ್ಧಿಪಡಿಸಿದ ನಂತರ ವಿವಿಧ ಇಲಾಖೆಗಳು ಆಯಾಯ ಇಲಾಖೆಗಳ ಸುಸ್ತಿತಿಯಲ್ಲಿರುವ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಡೆಸಿ ಅದನ್ನು ದುರಸ್ತಿಗೊಳಿಸದೇ ಹಾಗೆಯೇ ಬಿಡುತ್ತಾರೆ. ಇದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರಲಿದೆ. ಅಲ್ಲದೇ ವಾಹನಗಳ ಸಂಚಾರಕ್ಕೂ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ದುರಸ್ಥಿ ಕಾರ್ಯ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಎಲ್ಲೆಲ್ಲಿ ಕಾಮಗಾರಿ ನಡೆಸಿದ್ದಾರೆ ಅಲ್ಲೆಲ್ಲಾ ಲೊಕೆಶನ್ ನ ಫೋಟೋ ಸಮೇತ ಪಟ್ಟಿ ಮಾಡಬೇಕು. ಅನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಸಭೆ ನಡೆಸಿ ಕೂಡಲೆ ದುರಸ್ಥಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಬೇಕು. ದುರಸ್ಥಿ ಕಾರ್ಯ ಪೂರ್ಣಗೊಂಡ ಬಳಿಕ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಹೊಸದಾಗಿ ರಸ್ತೆ ಅಗೆಯಲು ಅನುಮತಿ ನೀಡಲು ಸೂಚನೆ ನೀಡಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಯಾವುದೇ ಇಲಾಖೆಗಾಗಲಿ ರಸ್ತೆ ಅಗೆತ ನಡೆಸಿದ್ದದಲ್ಲಿ ಅಂತಹವುಗಳನ್ನು ಲೊಕೇಶನ್ ಹಾಗೂ ಫೋಟೋದೊಂದಿಗೆ ವಾರ್ಡ್ ವಾರು ಪಟ್ಟಿ ಮಾಡಿಕೊಟ್ಟಲ್ಲಿ ಆಯಾಯ ಇಲಾಖೆಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ದುರಸ್ಥಿ/ಗುಂಡಿ ಮುಚ್ಚುವ ಕೆಲಸ ಮಾಡಲು ಕ್ರಮ ವಹಿಸಬಹುದಾದ್ದರಿಂದ ಕೂಡಲೇ ಪಟ್ಟಿ ಮಾಡಿಕೊಡಲು ಸೂಚಿಸಿದರು.
ಸಂಪಿಂಗೆ ರಸ್ತೆ, ಶೇಷಾದ್ರಿ ರಸ್ತೆ ಶಿವಾನಂದ ವೃತ್ತ, ಹಾಗೂ ಸುತ್ತಮುತ್ತಲಿನ ರಸ್ತೆಗಳು ಸೇರಿದಂತೆ ಸುಮಾರು 6 ಕಿ.ಮೀ ಉದ್ದದ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮೇಲ್ಮೈ ಪದರ ದುರಸ್ತಿ ಹಾಗೂ ರಸ್ತೆ ಗುಂಡಿಗಳನ್ನು ತ್ವರಿತ ಗತಿಯಲ್ಲಿ ಮುಚ್ಚಬೇಕು. ಶಿವಾನಂದ ವೃತ್ತದ ಬಳಿಯಿರುವ ಎಲ್ಲಾ ರಸ್ತೆಗಳಲ್ಲಿ ಮೇಲ್ಮೈ ಪದರ ಸಂಪೂರ್ಣ ಹಾಳಾಗಿದ್ದು, ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.
ಶೇಷಾದ್ರಿಪುರಂ ನ ಕುಮಾರ ಪಾರ್ಕ್ ರಸ್ತೆಯ ರೈಲ್ವೆ ಸಮಾನನಾಂತರ ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಗಮನಿಸಿ, ಕೂಡಲೆ ಸ್ವಚ್ಛತಾ ಕಾರ್ಯ ಕೈಗೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆ ಬೀದಿ ಬದಿ ದೀಪಗಳು ಹಾಳಾಗಿದ್ದರೆ ಅದನ್ನು ಅಳವಡಿಸಲು ಸೂಚನೆ ನೀಡಿದರು.











Click it and Unblock the Notifications