ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ, ಅಪಾರ್ಟ್‌ಮೆಂಟ್‌ಗಳಿಗೂ ಹೊಸ ನಿಯಮ
ಬೆಂಗಳೂರು, ಆಗಸ್ಟ್ 06; ಬೆಂಗಳೂರು ನಗರದಲ್ಲಿ ಕೋವಿಡ್ 3ನೇ ಅಲೆ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಗುರುವಾರ 414 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಬಿಬಿಎಂಪಿ ಕೆಲವು ನಿರ್ದೇಶನಗಳನ್ನು ನೀಡಿದೆ. ಗುಂಪು ಚಟುವಟಿಕೆಗಳನ್ನು ನಡೆಸದಂತೆ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಕ್ಕೆ ಸೂಚನೆ ಕೊಡಲಾಗಿದೆ.
ವಾಕಿಂಗ್, ಜಾಗಿಂಗ್ ನಂತಹ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹೆಚ್ಚು ಜನರು ಸೇರುವ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಹೇಳಿದೆ. ಕೆಲವು ದಿನಗಳಿಂದ ಅಪಾರ್ಟ್‌ಮೆಂಟ್‌ಗಳಲ್ಲಿಯೇ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.

ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಕೇರಳ, ಮಹಾರಾಷ್ಟ್ರದಿಂದ ಅಪಾರ್ಟ್‌ಮೆಂಟ್‌ಗಳಿಗೆ ಬರುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಕೋವಿಡ್ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲವಾದರೆ ಬೇರೆ ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಐಸೋಲೆಷನ್‌ನಲ್ಲಿ ಇರಲು ಸೂಚಿಸಿ ಎಂದು ಬಿಬಿಎಂಪಿ ನಿರ್ದೇಶನ ನೀಡಿದೆ.
ಕರ್ನಾಟಕ ಸರ್ಕಾರ ಶೇ 50ರಷ್ಟು ಜನರೊಂದಿಗೆ ಜಿಮ್ ತೆರೆಯಲು ಅನುಮತಿ ನೀಡಿದೆ. ಅಪಾರ್ಟ್‌ಮೆಂಟ್‌ಗಳಲ್ಲಿಯೂ ಇದನ್ನು ಪಾಲಿಸಬೇಕು. ಸ್ವಿಮ್ಮಿಂಗ್ ಪೂಲ್ ತೆರೆಯಬಾರದು ಎಂದು ಬಿಬಿಎಂಪಿ ಅಪಾರ್ಟ್‌ಮೆಂಟ್‌ಗಳಿಗೆ ಸೂಚಿಸಿದೆ.
ಅಪಾರ್ಟ್‌ಮೆಂಟ್‌ನ ಒಂದೇ ಫ್ಲೋರ್‌ನಲ್ಲಿ 3 ಕೋವಿಡ್ ಪ್ರಕರಣ ಪತ್ತೆಯಾದರೆ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ. ಮೂರಕ್ಕಿಂತ ಹೆಚ್ಚು ಪ್ರಕರಣ ದಾಖಲಾದರೆ ಇಡೀ ಬ್ಲಾಕ್ ಕಂಟೈನ್ಮೆಂಟ್ ಝೋನ್ ಆಗಲಿದೆ ಎಂದು ಬಿಬಿಎಂಪಿ ಹೇಳಿದೆ.
ನಿಷೇಧಾಜ್ಞೆ ಜಾರಿ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 16ರ ಬೆಳಗ್ಗೆ 6 ಗಂಟೆಯ ತನಕ ಈ ಆದೇಶ ಜಾರಿಯಲ್ಲಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ 4ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಸಾಂಕ್ರಮಿಕ ರೋಗ ತಡೆ ಕಾಯ್ದೆ ಅನ್ವಯ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸ್ವ್ಯಾಬ್ ಸಂಗ್ರಹ ಆರಂಭ; ಕೇರಳ ಮತ್ತು ಮಹಾರಾಷ್ಟ್ರದಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಬರುವ ಪ್ರಯಾಣಿಕರ ಸ್ವ್ಯಾಬ್ ಸಂಗ್ರಹವನ್ನು ಬಿಬಿಎಂಪಿ ಆರಂಭ ಮಾಡಿದೆ. ಬುಧವಾರ ಸಂಜೆಯ ತನಕ ಬಸ್, ರೈಲು ನಿಲ್ದಾಣದಲ್ಲಿ 1736 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹ ಮಾಡಲಾಗಿದೆ.
1736 ಮಾದರಿಗಳ ಪೈಕಿ ಪೂರ್ವ ವಲಯ, ಆರ್. ಆರ್. ನಗರ ವಲಯದಲ್ಲಿ 265 ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಪಶ್ಚಿಮ ಸೇರಿದಂತೆ ಇತರ ವಲಯದಲ್ಲಿ 30 ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಮೆಜೆಸ್ಟಿಕ್, ಯಶವಂತಪುರ, ಕಂಟೈನ್ಮೆಂಟ್, ಕೆ. ಆರ್. ಪುರಂ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ರೈಲು ಮತ್ತು ಬಸ್ ನಿಲ್ದಾಣದಲ್ಲಿ ಸ್ವ್ಯಾಬ್ ಸಂಗ್ರಹ ಮಾಡಲು ತಂಡವನ್ನು ನಿಯೋಜನೆ ಮಾಡುವಂತೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಆರ್‌ಟಿಪಿಸಿಆರ್ ವರದಿ ಇಲ್ಲದೇ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಇದನ್ನು ಬಿಬಿಎಂಪಿ ಶುಕ್ರವಾರದಿಂದ ಆರಂಭಿಸಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ 414 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 5 ಜನರು ಮೃತಪಟ್ಟಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8560 ಆಗಿದೆ. ನಗರದ ಒಟ್ಟು ಪ್ರಕರಣಗಳ ಸಂಖ್ಯೆ 1229340.












Click it and Unblock the Notifications