ಕನ್ನಡಿಗರ ಆಕ್ರೋಶ: ಬೆಂಗಳೂರಿನಲ್ಲಿ ಮತ್ತೆ ರಾರಾಜಿಸಿದ ಹಿಂದಿ ಕರಪತ್ರ!
ಬೆಂಗಳೂರು: ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರ ಹಿಂಬಾಲಕರು ಗೆಲುವಿಗಾಗಿ ಮಾಡುತ್ತಿರುವ ಕೆಲಸ ಒಂದೆರಡಲ್ಲ. ಅದರಲ್ಲೂ ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಗಳನ್ನ ಬಳಸಿ, ವೋಟು ಕೇಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ತೀವ್ರ ಆಕ್ರೋಶ ಮೊಳಗುತ್ತಿದ್ದು, ಇಂತಹ ತಪ್ಪು ಮಾಡುವ ಪ್ರತಿಯೊಂದು ರಾಜಕೀಯ ಪಕ್ಷದ ವಿರುದ್ಧವೂ ಕನ್ನಡಿಗರು ಧ್ವನಿ ಎತ್ತುತ್ತಿದ್ದಾರೆ.
ನಿನ್ನೆ ತಾನೆ ಸಂಸದ ತೇಜಸ್ವಿ ಸೂರ್ಯ ಪರಭಾಷಿಕರ ಎದುರು ಹಿಂದಿಯಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಮಧ್ಯಪ್ರದೇಶ ಅಸೋಸಿಯೇಷನ್ ಬೆಂಗಳೂರಲ್ಲಿ ಏರ್ಪಡಿಸಿರುವ ರಾಜಸ್ಥಾನ ಸಮುದಾಯದ ಸಮಾರಂಭದ ಹಿಂದಿ ಕರಪತ್ರ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಆಹ್ವಾನಿಸಿರುವ ಅತಿಥಿಗಳ ಪೈಕಿ ಬಹುತೇಕರು ಬಿಜೆಪಿ ನಾಯಕರೇ ಆಗಿದ್ದು, ಹಿಂದಿಯಲ್ಲಿ ಕರಪತ್ರ ಮುದ್ರಿಸಿ ಮಧ್ಯ ಭಾಗದಲ್ಲಿ ಗೋವಿಂದರಾಜನಗರ ಬಿಜೆಪಿ ಅಭ್ಯರ್ಥಿ ಕೆ.ಉಮೇಶ್ ಶೆಟ್ಟಿ ಅವರ ಫೋಟೋ ಹಾಕಲಾಗಿದೆ. ಹಿಂದಿ ಕರಪತ್ರಕ್ಕೆ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

'ಹೇಳೋರಿಲ್ಲ ಕೇಳೋರಿಲ್ಲ.. ವೋಟಿಗಾಗಿ..'
ಇನ್ನು ಈ ಬಗ್ಗೆ ಕರಪತ್ರದ ಟ್ವೀಟ್ ಮಾಡಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ಹೊರಹಾಕಿದ್ದಾರೆ, 'ಹೇಳೋರಿಲ್ಲ ಕೇಳೋರಿಲ್ಲ. ವೋಟಿಗಾಗಿ ಹೇಗಿದ್ದ ಕರ್ನಾಟಕ ನಾ ಹೇಗ್ ಮಾಡ್ತಿದ್ದೀರಪ್ಪ. ಅಪ್ಪಟ ಕನ್ನಡಿಗರ ಗೋವಿಂದರಾಜನಗರದಲ್ಲಿ, ಮೊನ್ನೆ ತಮಿಳು ಭಾಷಣ ಇಂದು ನೋಡಿ ಹಿಂದಿಮಯ.. ಒಟ್ನಲ್ಲಿ ಕರ್ನಾಟಕನಾ ಹಿಂದಿರಾಜ್ಯ ಮಾಡೋತನಕ ಬಿಡೋಲ್ಲ ಅನ್ನಿಸುತ್ತೆ...' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಈ ಟ್ವೀಟ್ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ.
ಹೇಳೋರಿಲ್ಲ ಕೇಳೋರಿಲ್ಲ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 2, 2023
ವೋಟಿಗಾಗಿ ಹೇಗಿದ್ದ ಕರ್ನಾಟಕ ನಾ ಹೇಗ್ ಮಾಡ್ತಿದ್ದೀರಪ್ಪ
ಅಪ್ಪಟ ಕನ್ನಡಿಗರ ಗೋವಿಂದರಾಜನಗರದಲ್ಲಿ
ಮೊನ್ನೆ ತಮಿಳು ಭಾಷಣ
ಇಂದು ನೋಡಿ ಹಿಂದಿಮಯ..
ಒಟ್ನಲ್ಲಿ ಕರ್ನಾಟಕನಾ ಹಿಂದಿರಾಜ್ಯ ಮಾಡೋತನಕ ಬಿಡೋಲ್ಲ ಅನ್ನಿಸುತ್ತೆ... pic.twitter.com/ipDu1W8IRz
ಹಿಂದಿಯಲ್ಲಿ ಸೂರ್ಯ ಭರ್ಜರಿ ಭಾಷಣ
ನಿನ್ನೆ ಕೂಡ ಇಂತಹದ್ದೇ ವಿಚಾರ ಸದ್ದು ಮಾಡಿತ್ತು. ತೇಜಸ್ವಿ ಸೂರ್ಯ ವಿರುದ್ಧ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದರು. ಬೆಂಗಳೂರು ಅಪಾರ್ಟ್‌ಮೆಂಟ್ ಒಂದ್ರಲ್ಲಿ ಸಂಸದ ತೇಜಸ್ವಿ ಸೂರ್ಯ ಪರಭಾಷಿಕರ ಮೆಚ್ಚಿಸಲು ಹಿಂದಿಯಲ್ಲಿ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ವಲಸಿಗರೇ ಪ್ರಮುಖ ಕಾರಣ ಎನ್ನುವ ರೀತಿ ಮಾತನಾಡಿರುವ ಆರೋಪ ಕೇಳಿಬಂದಿತ್ತು ಹಿಂದಿ-ಇಂಗ್ಲಿಷ್ ಜೊತೆ ಕನ್ನಡ ಯಾಕೆ ಮರೆತುಹೋಯ್ತಾ? ಎಂಬ ಪ್ರಶ್ನೆಯನ್ನೂ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದರು. ಇದೀಗ ಹಿಂದಿ ಕರಪತ್ರ ವೈರಲ್ ಆಗುತ್ತಿದೆ.
)ಎಲ್ಲವೂ ವೊಟ್ಗಾಗಿ.
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 1, 2023
ಬೆಂಗಳೂರು ಇವತ್ತು ಅಭಿವೃದ್ಧಿ ಹೊಂದಿದ ನಗರ ಆಗೋಕೆ ಕಾರಣವೇ ವಲಸಿಗರು ಅನ್ನೋ ಹೇಳಿಕೆ ಕೊಡುತ್ತಿರೋ@Tejasvi_Surya ನಾಚಿಕೆ ಆಗ್ಬೇಕು
ನಾಳೆ ಇಡೀ ಕರ್ನಾಟಕ ಕಟ್ಟಿದ್ದೆ ನೀವೇ ಅಂತ ಹೇಳೋಕು ಹೇಸೊಲ್ಲಾ😡
ಬೆಂಗಳೂರು ಇಂದು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲೋಕೆ ಕಾರಣ ಕನ್ನಡಿಗರು
ಮಹಾರಾಜರು,ಕೆಂಪೇಗೌಡರ ದೂರದೃಷ್ಟಿ. pic.twitter.com/US0cM9wm4P
ಶಿವಮೊಗ್ಗದ ಘಟನೆಯಿಂದ ಘಾಸಿ!
ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚು. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರ ಹೊರತು ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರ ಸಂಖ್ಯೆಯೇ ಜಾಸ್ತಿ. ಹೀಗೆ ಪರಭಾಷಿಕರ ಮತ ಪಡೆಯಲು ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಮಾಡುತ್ತಿರುವುದು ಕನ್ನಡಿಗರಿಗೆ ಕೋಪತರಿಸಿದೆ. ಶಿವಮೊಗ್ಗದಲ್ಲಿ ತಮಿಳು ನಾಡಗೀತೆ ಹಾಕಿ, ಅರ್ಧಕ್ಕೆ ನಿಲ್ಲಿಸಿ ತಮಿಳು ಭಾಷಿಕರು-ಕನ್ನಡಿಗರ ಮಧ್ಯೆ ವೈಮನಸ್ಸು ತಂದಿಟ್ಟ ಆರೋಪದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಇಂತಹ ಎಡವಟ್ಟು ವೈರಲ್ ಆಗುತ್ತಿದೆ.
ಕನ್ನಡ ನಾಡಲ್ಲಿ ಪರಭಾಷಿಕರ ಓಲೈಕೆ!
ಹೌದು, ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅಲ್ಲಿನ ಸ್ಥಳೀಯ ಭಾಷೆಗಳಲ್ಲೇ ಮತ ಕೇಳುತ್ತಾರೆ. ಅಲ್ಲಿ ರಾಜಕಾರಣಿಗಳು ಸ್ಥಳೀಯ ಭಾಷೆ ಬಳಸುತ್ತಾರೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದರೆ ಯಾಕಿಂಗೆ? ರಾಜ್ಯದ ಹೃದಯ ಬೆಂಗಳೂರಿಗೆ ಬಂದರೆ ತಮಿಳು, ತೆಲುಗು, ಹಿಂದಿ ಭಾಷಿಕರ ಓಲೈಕೆಗೋಸ್ಕರ ರಾಜಕೀಯ ಪಕ್ಷಗಳು ನಾ ಮುಂದು, ತಾ ಮುಂದು ಅಂತಾ ಮುಗಿಬೀಳುತ್ತವೆ. ಮತದಾರರನ್ನ ಸೆಳೆಯಲು ಅವರದ್ಧೇ ಭಾಷೆ ಬಳಸಿ ಓಲೈಕೆಗೆ ಮುಂದಾಗುತ್ತಾರೆ. ಹಾಗಾದರೆ ರಾಜಕೀಯ ಪಕ್ಷಗಳ ಈ ಕ್ರಮ ಒಪ್ಪಬಹುದಾ? ಎನ್ನುವ ಪ್ರಶ್ನೆಯನ್ನ ಕನ್ನಡಿಗರು ಕೇಳುತ್ತಿದ್ದಾರೆ.
ಕನ್ನಡ ಬಂದೇ ಬರುತ್ತೆ ತಾನೆ?
ಇನ್ನೂ ಒಂದಿಷ್ಟು ಕನ್ನಡಿಗರು ಕರ್ನಾಟಕದ ರಾಜಕಾರಣಿಗಳಿಗೆ ಕೇಳುತ್ತಿರುವ ಪ್ರಶ್ನೆ, ಪರಭಾಷಿಕರಿಗೆ ಕನ್ನಡ ಬರುತ್ತೆ ತಾನೆ? ಎಂಬುದು. ಬೆಂಗಳೂರಿಗೆ ಬಂದು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಪರಭಾಷಿಕರು ಕನಿಷ್ಠ ಅಂದರೂ ಒಂದಷ್ಟು ವರ್ಷಗಳಿಂದ ಇಲ್ಲೇ ನೆಲೆಸಿರುತ್ತಾರೆ. ಹಾಗೆ ನೋಡಿದ್ರೆ ಅವ್ರಿಗೆ ಕನ್ನಡ ಬಂದೇ ಬರುತ್ತೆ. ಕನ್ನಡ ಮಾತನಾಡಲು ಬರದೇ ಇದ್ದರೂ ಕನ್ನಡ ಅರ್ಥವಾಗುತ್ತದೆ. ಹಾಗಿದ್ದೂ ಬೇರೆ ಭಾಷೆ ಬಳಕೆ ಮಾಡುತ್ತಿರುವುದು ಯಾಕೆ? ರಾಜಕೀಯ ಪಕ್ಷಗಳಿಗೆ ಇಂತಹ ಓಲೈಕೆ ರಾಜಕಾರಣ ಬೇಕಾ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.
ಅದೆಲ್ಲಾ ಏನೇ ಇರಲಿ, ಕರ್ನಾಟಕದಲ್ಲಿ ಕನ್ನಡ ಬಳಕೆಯಾಗಲಿ ಎಂಬುದೇ ಕನ್ನಡಿಗರ ಆಶಯ. ಹಾಗೇ ಬೇರೆ ಭಾಷೆ ಬಳಸಲು ಹೋಗಿ ಎಡವಟ್ಟು ಮಾಡಿ, ಭಾಷಾ ಸಂಘರ್ಷ ತಂದಿಡಬೇಡಿ ಎಂಬುದು ಕನ್ನಡ ಪರ ಹೋರಾಟಗಾರರ ಆಗ್ರಹ. ಆದರೆ ರಾಜಕೀಯ ಪಕ್ಷಗಳು ಮಾತ್ರ ವೋಟ್‌ಗಾಗಿ ಇದನ್ನ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆಲ್ಲಾ ಮತದಾರ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.











Click it and Unblock the Notifications