ವಲಸಿಗರಿಂದಲೇ ಬೆಂಗಳೂರು ಅಭಿವೃದ್ಧಿ ಅಂದ್ರಾ ತೇಜಸ್ವಿ ಸೂರ್ಯ?
ಬೆಂಗಳೂರು: ಚುನಾವಣೆ ಗೆಲುವಿಗೆ ರಾಜಕೀಯ ಪಕ್ಷಗಳು ತಮ್ಮ ತಂತ್ರ, ರಣತಂತ್ರ ಇತ್ಯಾದಿ ಇತ್ಯಾದಿ ಅನುಸರಿಸುತ್ತಿವೆ. ಜೊತೆಗೆ ಪರಭಾಷಿಕರ ಓಲೈಕೆ ಕೂಡ ಜೊರಾಗಿದೆ. ಅದ್ರಲ್ಲೂ ಬಿಜೆಪಿ ನಾಯಕರ ವಿರುದ್ಧ ಈ ಆರೋಪವನ್ನ ವಿರೋಧ ಪಕ್ಷಗಳ ನಾಯಕರು ಮಾಡುತ್ತಿದ್ದರು. ಈಗ ಕನ್ನಡ ಪರ ಹೋರಾಟಗಾರರು ಕೂಡ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚು. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರ ಹೊರತು ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರ ಸಂಖ್ಯೆಯೇ ಜಾಸ್ತಿ. ಹೀಗೆ ಪರಭಾಷಿಕರ ಮತ ಪಡೆಯಲು ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಮಾಡುತ್ತಿರುವುದು ಕನ್ನಡಿಗರಿಗೆ ಕೋಪತರಿಸಿದೆ. ಶಿವಮೊಗ್ಗದಲ್ಲಿ ತಮಿಳು ನಾಡಗೀತೆ ಹಾಕಿ, ಅರ್ಧಕ್ಕೆ ನಿಲ್ಲಿಸಿ ತಮಿಳು ಭಾಷಿಕರು-ಕನ್ನಡಿಗರ ಮಧ್ಯೆ ವೈಮನಸ್ಸು ತಂದಿಟ್ಟ ಆರೋಪದ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹಿಂದಿ ಮತ್ತು ಇಂಗ್ಲಿಷ್ ಮಿಶ್ರಿತ ಭಾಷಣ ವೈರಲ್ ಆಗಿದೆ.

ಹಿಂದಿಯಲ್ಲಿ ಸೂರ್ಯ ಭರ್ಜರಿ ಭಾಷಣ
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ತೇಜಸ್ವಿ ಸೂರ್ಯ ವಿರುದ್ಧ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಸಂಸದ ತೇಜಸ್ವಿ ಸೂರ್ಯ ಪರಭಾಷಿಕರನ್ನ ಮೆಚ್ಚಿಸಲು ಹಿಂದಿಯಲ್ಲಿ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ವಲಸಿಗರೇ ಪ್ರಮುಖ ಕಾರಣ ಎನ್ನುವ ರೀತಿ ಮಾತನಾಡಿರುವ ಆರೋಪ ಕೇಳಿಬಂದಿದೆ. ಹಿಂದಿ-ಇಂಗ್ಲಿಷ್ ಜೊತೆ ಕನ್ನಡ ಯಾಕೆ ಮರೆತುಹೋಯ್ತಾ? ಎಂಬ ಪ್ರಶ್ನೆಯನ್ನೂ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.
'ಎಲ್ಲವೂ ವೊಟ್ಗಾಗಿ..'
ಇನ್ನು ರೂಪೇಶ್ ರಾಜಣ್ಣ ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ, 'ಎಲ್ಲವೂ ವೊಟ್ಗಾಗಿ.
ಬೆಂಗಳೂರು ಇವತ್ತು ಅಭಿವೃದ್ಧಿ ಹೊಂದಿದ ನಗರ ಆಗೋಕೆ ಕಾರಣವೇ ವಲಸಿಗರು ಅನ್ನೋ ಹೇಳಿಕೆ ಕೊಡುತ್ತಿರೋ
@Tejasvi_Surya ನಾಚಿಕೆ ಆಗ್ಬೇಕು. ನಾಳೆ ಇಡೀ ಕರ್ನಾಟಕ ಕಟ್ಟಿದ್ದೆ ನೀವೇ ಅಂತ ಹೇಳೋಕು ಹೇಸೊಲ್ಲಾ😡 ಬೆಂಗಳೂರು ಇಂದು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲೋಕೆ ಕಾರಣ ಕನ್ನಡಿಗರು ಮಹಾರಾಜರು, ಕೆಂಪೇಗೌಡರ ದೂರದೃಷ್ಟಿ.' ಎಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ವೊಟ್ಗಾಗಿ.
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 1, 2023
ಬೆಂಗಳೂರು ಇವತ್ತು ಅಭಿವೃದ್ಧಿ ಹೊಂದಿದ ನಗರ ಆಗೋಕೆ ಕಾರಣವೇ ವಲಸಿಗರು ಅನ್ನೋ ಹೇಳಿಕೆ ಕೊಡುತ್ತಿರೋ@Tejasvi_Surya ನಾಚಿಕೆ ಆಗ್ಬೇಕು
ನಾಳೆ ಇಡೀ ಕರ್ನಾಟಕ ಕಟ್ಟಿದ್ದೆ ನೀವೇ ಅಂತ ಹೇಳೋಕು ಹೇಸೊಲ್ಲಾ😡
ಬೆಂಗಳೂರು ಇಂದು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲೋಕೆ ಕಾರಣ ಕನ್ನಡಿಗರು
ಮಹಾರಾಜರು,ಕೆಂಪೇಗೌಡರ ದೂರದೃಷ್ಟಿ. pic.twitter.com/US0cM9wm4P
ಕನ್ನಡ ನಾಡಲ್ಲಿ ಪರಭಾಷಿಕರ ಓಲೈಕೆ!
ಹೌದು, ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅಲ್ಲಿನ ಸ್ಥಳೀಯ ಭಾಷೆಗಳಲ್ಲೇ ಮತ ಕೇಳುತ್ತಾರೆ. ಅಲ್ಲಿ ರಾಜಕಾರಣಿಗಳು ಸ್ಥಳೀಯ ಭಾಷೆ ಬಳಸುತ್ತಾರೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದರೆ ಯಾಕಿಂಗೆ? ರಾಜ್ಯದ ಹೃದಯ ಬೆಂಗಳೂರಿಗೆ ಬಂದರೆ ತಮಿಳು, ತೆಲುಗು, ಹಿಂದಿ ಭಾಷಿಕರ ಓಲೈಕೆಗೋಸ್ಕರ ರಾಜಕೀಯ ಪಕ್ಷಗಳು ನಾ ಮುಂದು, ತಾ ಮುಂದು ಅಂತಾ ಮುಗಿಬೀಳುತ್ತವೆ. ಮತದಾರರನ್ನ ಸೆಳೆಯಲು ಅವರದ್ಧೇ ಭಾಷೆ ಬಳಸಿ ಓಲೈಕೆಗೆ ಮುಂದಾಗುತ್ತಾರೆ. ಹಾಗಾದರೆ ರಾಜಕೀಯ ಪಕ್ಷಗಳ ಈ ಕ್ರಮ ಒಪ್ಪಬಹುದಾ? ಎನ್ನುವ ಪ್ರಶ್ನೆಯನ್ನ ಕನ್ನಡಿಗರು ಕೇಳುತ್ತಿದ್ದಾರೆ.
ಕನ್ನಡ ಬಂದೇ ಬರುತ್ತೆ ತಾನೆ?
ಇನ್ನೂ ಒಂದಿಷ್ಟು ಕನ್ನಡಿಗರು ಕರ್ನಾಟಕದ ರಾಜಕಾರಣಿಗಳಿಗೆ ಕೇಳುತ್ತಿರುವ ಪ್ರಶ್ನೆ, ಪರಭಾಷಿಕರಿಗೆ ಕನ್ನಡ ಬರುತ್ತೆ ತಾನೆ? ಎಂಬುದು. ಬೆಂಗಳೂರಿಗೆ ಬಂದು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಪರಭಾಷಿಕರು ಕನಿಷ್ಠ ಅಂದರೂ ಒಂದಷ್ಟು ವರ್ಷಗಳಿಂದ ಇಲ್ಲೇ ನೆಲೆಸಿರುತ್ತಾರೆ. ಹಾಗೆ ನೋಡಿದ್ರೆ ಅವ್ರಿಗೆ ಕನ್ನಡ ಬಂದೇ ಬರುತ್ತೆ. ಕನ್ನಡ ಮಾತನಾಡಲು ಬರದೇ ಇದ್ದರೂ ಕನ್ನಡ ಅರ್ಥವಾಗುತ್ತದೆ. ಹಾಗಿದ್ದೂ ಬೇರೆ ಭಾಷೆ ಬಳಕೆ ಮಾಡುತ್ತಿರುವುದು ಯಾಕೆ? ರಾಜಕೀಯ ಪಕ್ಷಗಳಿಗೆ ಇಂತಹ ಓಲೈಕೆ ರಾಜಕಾರಣ ಬೇಕಾ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.
ಒಟ್ನಲ್ಲಿ ಮತಗಳ ಓಲೈಕೆಗಾಗಿ ರಾಜಕೀಯ ಪಕ್ಷಗಳು ಭಾಷಾ ಅಸ್ತ್ರ ಪ್ರಯೋಗಿಸುತ್ತಿವೆ. ಆದರೆ ರಾಜಕೀಯ ಪಕ್ಷಗಳ ಮತ ಓಲೈಕೆ ತಂತ್ರ ಅದೆಷ್ಟರಮಟ್ಟಿಗೆ ವರ್ಕೌಟ್ ಆಗತ್ತೆ ಅನ್ನೋದನ್ನ ತಿಳಿಯಲು ಇನ್ನು ಕೆಲವೇ ದಿನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕರ್ನಾಟಕದಲ್ಲಿ ಯಾವ ಅಸ್ತ್ರ ವರ್ಕೌಟ್ ಆಗಿದೆ ಅನ್ನೋದು ಕೂಡ ಕನ್ಫರ್ಮ್ ಆಗಲಿದೆ.











Click it and Unblock the Notifications