KKRDBಗೆ ಅನುದಾನ ನೀಡದ್ದಕ್ಕೆ ಟೀಕೆ: ಆರ್ಟಿಕಲ್ 371 ತಿರಸ್ಕಾರ ಮಾಡಿದ್ದೇ ಬಿಜೆಪಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆಬ್ರವರಿ 27: ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ ಮಾಡಿದ್ದ ರಾಜ್ಯ ಸರ್ಕಾರದಿಂದ KKRDBಗೆ ಹಣ ಬಿಡುಗಡೆ ಮಾಡಿಲ್ಲ ಎಂದು ವಿಪಕ್ಷ ನಾಯಕರು ದೂರಿದ್ದರು. ಇದಕ್ಕೆ ದಾಖಲೆ ಸಮೇತ ಉತ್ತರ ಕೊಟ್ಟಿರುವ ಐಟಿ ಬಿಟಿ ಹಾಗೂ ಪಂಚಾಯತ್ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಆರ್ಟಿಕಲ್ 371 ತಿರಸ್ಕಾರ ಮಾಡಿದ್ದರ ಬಗ್ಗೆ ಪೋಸ್ಟ್ ಮಾಡಿ ಬಿಜೆಪಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ವಿಷಯದಲ್ಲಿ ಮಾತಾನಾಡಲು ಆರ್.ಅಶೋಕ್ ಅವರೇ ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ, ದಿ. ಎಲ್.ಕೆ. ಅಡ್ವಾಣಿಯವರ ಈ ಪತ್ರವೇ ಹೇಳುತ್ತದೆ. ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಪತ್ರ ಪೋಸ್ಟ್ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕದ ಅನುದಾನದ ಬಗ್ಗೆ ಇಂದು ಬಿಜೆಪಿಯವುರ ಅನುದಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇ ಆರ್ಟಿಕಲ್ 371 ಜೆ. ಆದರೆ ಹಿಂದೆ ನಿಮ್ಮ ಬಿಜೆಪಿ ಸರ್ಕಾರ ಈ ವಿಶೇಷ ಸ್ಥಾನಮಾನವನ್ನು ತಿರಸ್ಕರಿಸಿತ್ತು. ದಶಕ ಕಳೆದರೂ ಬಿಜೆಪಿ ಆರ್ಟಿಕಲ್ 371ಜೆ ತಿರಸ್ಕರಿಸಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ಕೊಟ್ಟಿಲ್ಲ. ಅಶೋಕ್ ಸರ್, ಈಗ ನೀವಾದರೂ ಆರ್ಟಿಕಲ್ 371ಜೆ ತಿರಸ್ಕಾರಕ್ಕೆ ಕಾರಣಗಳನ್ನು ಕೊಡಿ ಎಂದು ಕುಟಿಕಿದ್ದಾರೆ.
ಹಿಂದುಳಿದ ಪ್ರದೇಶದ ಜನರ ಏಳಿಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು ಈಗ ನಮಗೆ ಪಾಠ ಮಾಡುವ ಅಗತ್ಯವಿಲ್ಲ.
ಹಿಂದಿನ ಬಿಜೆಪಿ ಸರ್ಕಾರ ಕೆಕೆಆರ್ ಡಿಬಿಯಲ್ಲಿ ಹಗರಣ ನಡೆಸುವ ಮೂಲಕ ಕಲ್ಯಾಣ ಕರ್ನಾಟಕದ ವಿರೋಧಿಯಾಗಿತ್ತು ಎನ್ನುವುದನ್ನು ಮರೆತಿದ್ದೀರಾ?
ಕೆಕೆಆರ್ ಡಿಬಿ ಹಗರಣವನ್ನು ನೀವು ಮರೆಮಾಚಿರಬಹುದು. ಆದರೆ ಜನತೆ ಮರೆತಿಲ್ಲ, ನಮ್ಮ ಸರ್ಕಾರವೂ ಮರೆತಿಲ್ಲ, ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಸರ್ಕಾರ ಮಾಡಿದ ಲೂಟಿಯ ದ್ರೋಹದ ಬಗ್ಗೆ ತನಿಖೆ ನಡೆಯುತ್ತಿದೆ. ಭ್ರಷ್ಟರಿಗೆ ಶಿಕ್ಷೆಯೂ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೊನೆಯ ಮಾತೊಂದು ಹೇಳುವುದಾದರೆ, ಎಲ್ಲಾ ಇಲಾಖೆಯಲ್ಲೂ, ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತೇನೆ ಎಂದು ಹೇಳುವ ಬಿಜೆಪಿಗರೇ, ಮುಖ್ಯಮಂತ್ರಿಗಳು ನನ್ನನ್ನು ಸರ್ಕಾರದ ವಕ್ತಾರನಾಗಿ ನೇಮಿಸಿದ್ದಾರೆ. ನಿಮ್ಮ ಸುಳ್ಳುಗಳನ್ನು ಬೇಧಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯವರಿಗೆ ನಾನು ಆಡುವ ಮಾತಿನಲ್ಲಿ ಸಮಸ್ಯೆ ಕಾಣುತ್ತಿದೆಯೇ ಅಥವಾ ನಾನು ಮಾತಾಡುವುದೇ ಸಮಸ್ಯೆಯಾಗಿ ಕಾಡುತ್ತಿದೆಯೇ?. ಬಿಜೆಪಿಗರು ನನ್ನನ್ನು 'ಬಡವ ನೀ ಮಡಗಿದಂಗೆ ಇರು' ಎಂಬ ರೀತಿಯಲ್ಲಿ ಕಾಣಲು ಬಯಸುತ್ತಿದ್ದಾರೆಯೇ? ನನ್ನ ಬಗ್ಗೆ ಇಷ್ಟೊಂದು ಅಸಹನೆ ಏಕೆ? ಎಂದು ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ ವಿರೋಧಿ ಸರ್ಕಾರ: ಆರ್.ಅಶೋಕ್ ಹೇಳಿದ್ದೇನು?
2024-25ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ ಡಿಬಿ) 5 ಸಾವಿರ ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿತ್ತು. ಅದಾಗಿ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದರೂ ಈ ಸಾಲಿನ ಅನುದಾನದಲ್ಲಿ ಮಂಡಳಿಗೆ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸಂಬಂಧಪಡದ ವಿಷಯಗಳಿಗೆಲ್ಲಾ ಅನವಶ್ಯಕವಾಗಿ ಮೂಗು ತೂರಿಸುವ ತಾವು, ಕಲ್ಯಾಣ ಕರ್ನಾಟಕಕ್ಕೆ ಬರಬೇಕಾದ ಅನುದಾನದ ವಿಷಯದಲ್ಲಿ ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದ್ದರು. ಸರ್ಕಾರ, ಸಿಎಂ ವಿರುದ್ಧ ಕಿಡಿ ಕಾರಿದ್ದರು. ಇದೀಗ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications