ಬೆಂಗಳೂರಿನಲ್ಲಿ ಟಿನೇಜರ್ಸ್ ಹಿಂದೆ ಬಿದ್ದ ಡೆಟೆಕ್ಟಿವ್ಸ್: ಇದು ಪೋಷಕರಿಂದಲೇ ನಡೆಯುತ್ತಿರುವ ಬೇಹುಗಾರಿಕೆ, ಸ್ಟೋಟಕ ವರದಿ
ಬೆಂಗಳೂರು, ಫೆಬ್ರವರಿ 19: ಇತ್ತೀಚಿಗೆ ವಿಭಕ್ತ ಕುಟುಂಬಗಳೇ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಕುಟುಂಬದೊಳಗಿನ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಗಂಡ-ಹೆಂಡತಿ ಇಬ್ಬರು ದುಡಿದರಷ್ಟೇ ಒಂದು ತಕ್ಕಮಟ್ಟಿನ ಜೀವನ ನಿರ್ವಹಿಸಬಹುದು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯಿ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗುತ್ತಿರುವುದು ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.
ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿರುವ ಬೆಂಗಳೂರಿನ ಕುಟುಂಬಗಳು ಇದೀಗ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂದು ಕಂಡುಹಿಡಿಯಲು ಖಾಸಗಿ ಪತ್ತೆದಾರರ ಸಹಾಯ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಪೋಷಕರು ತಮ್ಮ ಹದಿಹರೆಯದ ಮಕ್ಕಳ ಬಗ್ಗೆ ಖಾಸಗಿ ಪತ್ತೆದಾರರನ್ನು ನೇಮಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಬೆಂಗಳೂರಿನಲ್ಲಿ ಈ ರೀತಿಯ ಖಾಸಗಿ ಪತ್ತೆದಾರರ ಏಜೆನ್ಸಿ ಕಂಪನಿಗಳು ಆರಂಭವಾಗಿದ್ದು, ಇಂತಹ ಸಂಸ್ಥೆಗಳು ವಾರಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿವೆ. ಈ ಬಗ್ಗೆ'ಡೆಕ್ಕನ್ ಹೆರಾಲ್ಡ್' ಸವಿವರವಾಗಿ ವರದಿ ಮಾಡಿದೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ಖಾಸಗಿ ಡಿಟೆಕ್ಟಿವ್ ಸರ್ವೀಸಸ್ ಒಂದೇ ತಿಂಗಳಲ್ಲಿ ಆರು ಪ್ರಕರಣಗಳನ್ನು ನಿರ್ವಹಿಸಿದೆ. ಇನ್ನು ಎಂಜಿ ರೋಡ್‌ನಲ್ಲಿರುವ ಎರಡು ಡಿಟೆಕ್ಟಿವ್ ಸರ್ವೀಸಸ್ ಸಂಸ್ಥೆಗಳು ಎರಡು ತಿಂಗಳಿಗೆ ಕನಿಷ್ಠ ಹತ್ತರಿಂದ ಹದಿನೈದು ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿವೆಯಂತೆ. ಖಾಸಗಿ ಪತ್ತೇದಾರರನ್ನು ನೇಮಿಸಿಕೊಳ್ಳಲು ದಿನಕ್ಕೆ 5,000 ರಿಂದ 10,000 ರೂಪಾಯಿ ಅಥವಾ ವಾರಕ್ಕೆ 35,000 ರೂಪಾಯಿ ವೆಚ್ಚವಾಗಬಹುದು. ಕೆಲವೊಮ್ಮೆ ಪ್ಯಾಕೇಜ್‌ಗಳು ಇರಲಿದ್ದು, ಒಂದು ವ್ಯಕ್ತಿಗೆ 2.5 ಲಕ್ಷ ರೂಗಳವರೆಗೆ ಪ್ಯಾಕೇಜ್ ಇರುತ್ತವೆ. ಈ ಪತ್ತೆದಾರರು ಶಾಲೆಗಳು, ಕಾಲೇಜುಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧ ಪಟ್ಟ ವ್ಯಕ್ತಿಗೆ ಸಂಬಂಧಿಸಿದ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸುತ್ತಿರುತ್ತಾರೆ.
ಖಾಸಗಿ ಪತ್ತೆದಾರರ ನೇಮಕ ಯಾಕೆ?
ತಂದೆ-ತಾಯಿ ದುಡಿಮೆಯಲ್ಲಿ ಬ್ಯೂಸಿಯಾಗುತ್ತಿದ್ದಂತೆ ಪೋಷಕರು ಹಾಗೂ ಮಕ್ಕಳ ನಡುವೆ ಆತ್ಮೀಯತೆ ಕಡಿಮೆಯಾಗುತ್ತಿದ್ದು, ಮಕ್ಕಳು ತಮ್ಮಿಷ್ಟದಂತೆ ಬದುಕಲು ಆರಂಭಿಸುತ್ತಾರೆ. ಇನ್ನು ಟಿನೇಜ್ ಅಂದರೆ ಹದಿಹರೆಯದ ಮಕ್ಕಳನ್ನು ನಿರ್ವಹಿಸುವುದು ಪೋಷಕರಿಗೆ ದೊಡ್ಡ ಸವಾಲಾಗುತ್ತಿದೆ. ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ, ಲೈಂಗಿಕ ಸಂಬಂಧ ಹೀಗೆ ಅನೇಕ ವಿಚಾರಗಳು ಹದಿಹರೆಯದ ಮಕ್ಕಳನ್ನು ಸೆಳೆಯುತ್ತಿದ್ದು, ತಮ್ಮ ಮಕ್ಕಳು ಇಂತಹ ಸೆಳೆತಕ್ಕೆ ಸಿಲುಕಿದ್ದಾರಾ ಎಂದು ತಿಳಿಯಲು ಪೋಷಕರು ಈ ಖಾಸಗಿ ಪತ್ತೇದಾರರನ್ನು ನೇಮಿಸುತ್ತಿದ್ದಾರೆ.

ಪೋಷಕರು ತಮ್ಮ ಮಕ್ಕಳಲ್ಲಿ ಹಠಾತ್ ಬದಲಾವಣೆಗಳನ್ನು ಗಮನಿಸಿದಾಗ ಅಂದರೆ, ಶಾಲೆ ಅಥವಾ ಕಾಲೇಜು ಹಾಜರಾತಿಯಲ್ಲಿ ಕುಸಿತ, ತಮ್ಮ ಕೋಣೆಯಲ್ಲಿ ಒಂಟಿಯಾಗಿ ಇರುವುದು, ಹೆಚ್ಚು ಮೊಬೈಲ್ ಫೋನ್ ಬಳಸುವುದು, ಓದಿನಲ್ಲಿ ಆಸಕ್ತಿ ಕಡಿಮೆ, ಪೋಷಕರೊಂದಿಗೆ ಮಾತು ಕಡಿಮೆ, ಮನೆಗೆ ಬರುವ ಸಮಯದಲ್ಲಿ ಬದಲಾವಣೆ, ಹೆಚ್ಚು ಹಣ ಖರ್ಚು ಮಾಡುವುದು ಹೀಗೆ ಪೋಷಕರಿಗೆ ಏನೋ ಸರಿಯಿಲ್ಲ ಎಂದು ಎನಿಸುವ ಕೆಲವು ಬದಲಾವಣೆಗಳನ್ನು ಗಮನಿಸಿ ಖಾಸಗಿ ಪತ್ತೇದಾರರ ಸಹಾಯ ಪಡೆಯುತ್ತಾರೆ.
ಈ ರೀತಿ ತಮ್ಮ ಬಳಿಗೆ ಬಂದ ಪೋಷಕರಿಗೆ ಖಾಸಗಿ ಪತ್ತೇದಾರರ ಏಜೆನ್ಸಿ ಕಂಪನಿಗಳು ಸಹಾಯ ಮಾಡಿದ್ದು, ಮಕ್ಕಳು ಏನು ಮಾಡುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ, ಎಲ್ಲೆಲ್ಲಿ ಹಣ ವ್ಯಹಿಸುತ್ತಾರೆ, ಯಾವ್ಯಾವ ಕೆಟ್ಟ ಅಭ್ಯಾಸ ಕಲಿತ್ತಿದ್ದಾರೆ ಎಂದು ಮಕ್ಕಳಿಗೆ ತಿಳಿಯದಂತೆ ಪತ್ತೆ ಹಚ್ಚಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೇ ಇದರಿಂದ ಮಕ್ಕಳನ್ನು ಹೇಗೆ ಹೊರತರಬಹುದು ಎನ್ನುವ ಸಲಹೆಗಳನ್ನು ಕೂಡ ನೀಡುತ್ತಾರೆ.
ಈವರೆಗೂ ಪತ್ತೆ ಹಚ್ಚಿದ ಪ್ರಕರಣಗಳಲ್ಲಿ ಹದಿಹರೆಯದ ಮಕ್ಕಳು ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಜೊತೆಗೆ ಹಣಕ್ಕಾಗಿ ಸೈಬರ್ ವಂಚನೆ, ಬೆಟ್ಟಿಂಗ್ ಗೇಮ್‌ಗಳನ್ನು ಆಡುವ ಚಟ, ಕಳ್ಳತನದಂತಹ ಅಪರಾಧ ಕೃತ್ಯ ಮಾಡುತ್ತಿರುವುದು ಬೆಳಕಿಗೆ ಬಂದರೆ, ಕಾಲೇಜು ವಿದ್ಯಾರ್ಥಿಗಳು ಹೆಚ್ಚು ವಯಸ್ಸಾದ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಿರುವ ಪ್ರಕರಣಗಳು ಕೂಡ ಕಂಡು ಬಂದಿದೆ ಎಂದು ಖಾಸಗಿ ಪತ್ತೇದಾರರ ಏಜೆನ್ಸಿ ಕಂಪನಿಗಳ ನಿರ್ವಾಹಕರು ತಿಳಿಸಿದ್ದಾರೆ.












Click it and Unblock the Notifications