ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕ್ಯಾಬ್ ಚಾಲಕರ ಮನವಿ
ಬೆಂಗಳೂರು, ಜುಲೈ 28: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದಿರಾ ಕ್ಯಾಂಟೀನ್‌ಗಳು ಮರುಜೀವ ಪಡೆದುಕೊಂಡಿವೆ. ಊಟ, ತಿಂಡಿಯ ಮೆನು ಕೂಡ ಬದಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದೆಲ್ಲದರ ಜೊತೆ ವಿಮಾನ ನಿಲ್ದಾಣದಲ್ಲಿ ಕೂಡ ಇಂದಿರಾ ಕ್ಯಾಂಟೀನ್ ಆರಂಭವಾಗುವ ಸಾಧ್ಯತೆ ಇದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ಶೀಘ್ರದಲ್ಲೇ ಕ್ಯಾಬ್ ಚಾಲಕರು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರು ಕಡಿಮೆ ವೆಚ್ಚದಲ್ಲಿ ಊಟು, ತಿಂಡಿ ಮಾಡಬಹುದು. ವಿಮಾನ ನಿಲ್ದಾಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯ ಅಡಿಯಲ್ಲಿ ಬರುವುದಿಲ್ಲವಾದರೂ, ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನ ಪಡೆಯುವುದರಿಂದ ಇದನ್ನು "ವಿಶೇಷ ಪ್ರಕರಣ" ಎಂದು ಪರಿಗಣಿಸಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಬಹುದು ಎಂದು ಪಾಲಿಕೆ ಹೇಳಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ ವಿವಿಧ ಖಾಸಗಿ ಕ್ಯಾಬ್ ಯೂನಿಯನ್‌ಗಳ ಪ್ರತಿನಿಧಿಗಳು, ವಿಮಾನ ನಿಲ್ದಾಣದ ಹೊರಗೆ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿದರು, ವಿಮಾನ ನಿಲ್ದಾಣದಲ್ಲಿ ಊಟ, ತಿಂಡಿ ಹೆಚ್ಚಿನ ದರ ಇರುವುದರಿಂದ ಚಾಲಕರಿಗೆ ಕಷ್ಟವಾಗುತ್ತಿದೆ ಎಂದು ಮನವಿ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಭರವಸೆ
ವಿಮಾನ ನಿಲ್ದಾಣದ ಹೊರಗೆ ಒಂದು ಅಥವಾ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
"ವಿಮಾನ ನಿಲ್ದಾಣದಲ್ಲಿ ಆಹಾರ ದುಬಾರಿಯಾಗಿರುವುದರಿಂದ ಕ್ಯಾಬ್ ಚಾಲಕರಿಗೆ ಮಾತ್ರವಲ್ಲ ಅನೇಕ ಕಾರ್ಮಿಕರಿಗೆ ಕೂಡ ಕಷ್ಟವಾಗಿದೆ. ವಿಮಾನದಲ್ಲಿ ಓಡಾಡುವರಿಗೂ ಕೂಡ ಇದು ಅನುಕೂಲವಾಗಲಿದೆ. ಈ ಜನರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಅವರಿಗೆ ಕೈಗೆಟಕುವ ದರದಲ್ಲಿ ಆಹಾರವನ್ನು ಒದಗಿಸಲು ನಾವು ಬಯಸುತ್ತೇವೆ. ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಜಾಗವನ್ನು ಮೀಸಲಿಡಲು ಬಿಬಿಎಂಪಿ ಮೂಲಕ ನಾವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ" ಎಂದು ರಾಮಲಿಂಗಾರೆಡ್ಡಿ ಚಾಲಕರ ಸಂಘಗಳಿಗೆ ಭರವಸೆ ನೀಡಿದ್ದಾರೆ.
ಸೂಚನೆ ನೀಡಿದರೆ ಸ್ಥಾಪನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಬಗ್ಗೆ ಸಚಿವರಿಂದ ಯಾವುದೇ ಸೂಚನೆ ಬಂದಿಲ್ಲ, ಒಂದು ವೇಳೆ ಅವರು ಪತ್ರ ಬರೆದು ನಮಗೆ ತಲುಪಿದರೆ, ಇಂದಿರಾ ಕ್ಯಾಂಟೀನ್ ಆರಂಭಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ನಿಯಮಗಳ ಪ್ರಕಾರ ಇಂದಿರಾ ಕ್ಯಾಂಟೀನ್‌ಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಮಾತ್ರ ತೆರೆಯಬಹುದು, ಆದರೆ ವಿಮಾನ ನಿಲ್ದಾಣವು ಬಿಬಿಎಂಪಿ ಮಿತಿಯಲ್ಲಿ ಬರುವುದಿಲ್ಲ ಮತ್ತು ಕ್ಯಾಂಟೀನ್ ನಡೆಸಲು ಪಂಚಾಯಿತಿಗಳಿಗೆ ಅನುಮತಿ ಇಲ್ಲ ಎಂದು ಅವರು ವಿವರಣೆ ನೀಡಿದರು.
"ಹೆಚ್ಚಿನ ಜನ ಓಡಾಡುವ ಸ್ಥಳಗಳಲ್ಲಿ ಕ್ಯಾಂಟೀನ್ ಸ್ಥಾಪನೆ ಮಾಡಲು ನಮಗೆ ಅನುಮತಿ ಇದೆ. ಕೆಲವು ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜಿಸುತ್ತಿದ್ದೇವೆ. ವಿಮಾನ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮನವಿ ಬಂದರೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಿಬಿಎಂಪಿ ಕ್ಯಾಂಟೀನ್ ಆರಂಭಿಸಲಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.












Click it and Unblock the Notifications