ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಐಎಸ್ಸಿ ಬೆಂಗಳೂರಿನಲ್ಲಿ ರಾಷ್ಟ್ರಪತಿ ಮುಖರ್ಜಿ ಕೊನೆಯ ಭಾಷಣ

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 5: ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚು ಪ್ರಾಶಸ್ತ್ಯಕೊಟ್ಟು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗುವಂತೆ ಯುವ ಪೀಳಿಗೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.

ಅವರು ಇಂದು ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 2017 ರ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

ಈ ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮದಿಂದ ಪದವಿ ಪಡೆದಿದ್ದಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊಂದಿದ್ದಾರೆ. ಅವರೆಲ್ಲರ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

President Pranab Mukherjee made his last speech at IISC Bengaluru

ಭಾರತೀಯ ವಿಜ್ಞಾನ ಸಂಸ್ಥೆ 108 ವರ್ಷಗಳ ಇತಿಹಾಸ ಹೊಂದಿಗೆ. ಜೆ.ಎನ್. ಟಾಟಾ, ಮೈಸೂರು ಮಹಾರಾಜರು ಹಾಗೂ ಕೇಂದ್ರ ಸರ್ಕಾರ ಈ ಸಂಸ್ಥೆಯ ಬೆಳವಣಿಗೆ ಪ್ರೋತ್ಸಾಹ ನೀಡಿದ್ದಾರೆ. ಕಳೆದ 2 ವರ್ಷಗಳಲ್ಲಿ ಈ ಸಂಸ್ಥೆ ಸಾಕಷ್ಟು ಬೆಳೆದು ನಿಂತಿದೆ. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ ಎಂದರು.

"ನಮ್ಮದು ಹೆಚ್ಚು ಯುವಜನರನ್ನು ಹೊಂದಿರುವ ದೇಶ. ಅವರೇ ನಮ್ಮ ದೇಶದ ಸಂಪತ್ತು. ಶೈಕ್ಷಣಿಕ, ಔದ್ಯೋಗಿಕವಾಗಿ ಅವರು ಹೆಚ್ಚಿನ ಸಾಧನೆ ಮಾಡಬೇಕು. ಯುವ ಮನಸ್ಸುಗಳಿಗೆ ಸ್ಪೂರ್ತಿ ತುಂಬಲು ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರು ಕೇವಲ ಜ್ಞಾನರ್ಜನೆಗೆ ಮಾತ್ರ ಮೀಸಲಿರದೆ ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಎದುರಿಸುವ ಮಾರ್ಗಗಳನ್ನು ತಿಳಿಹೇಳಬೇಕು," ಎಂದು ರಾಷ್ಟ್ರಪತಿಗಳು ಹೇಳಿದರು.

"ಈ ಜಗತ್ತಿನ ನೈಜ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೆರ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಇಂದು ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಸವಾಲುಗಳನ್ನು ಯುವಕ ಯುವತಿಯುರು ಆರಿತುಕೊಳ್ಳಬೇಕು," ಎಂದು ಹೇಳಿದ ಪ್ರಣಬ್ ಮುಖರ್ಜಿ, ಸಂಸ್ಥೆಯಲ್ಲಿ 2500 ಜನ ಡಾಕ್ಟರೇಟ್ ಪಡೆದಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

"ಮೂಲ ವಿಜ್ಞಾನದಲ್ಲಿ ಹೆಚ್ಚು ಸಂಶೋಧನೆಗಳನ್ನು ನಡೆಸಬೇಕು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯತೆಯೂ ಇದೆ. ವಿಜ್ಞಾನ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆಯಿದೆ. ಐ.ಐಟಿ. ಅಥವಾ ಐ.ಐ.ಎಸ್.ಸಿ. ಯಲ್ಲಿ ಶಿಕ್ಷಣ ಪಡೆದವರು ಹೆಚ್ಚು ಬುದ್ಧಿಮತ್ತೆಯನ್ನು ಹೊಂದಿ ಸಮಸ್ಯೆಗಳನ್ನು ಬೇಗ ಪರಿಹರಿಸಬಲ್ಲರು ಎಂಬ ನಂಬಿಕೆಯಿದೆ," ಎಂದ ರಾಷ್ಟ್ರಪತಿಗಳು ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಖುರಾನ, ಸಿ.ಎನ್.ಆರ್. ರಾವ್, ಇಂಜಿನಿಯರ್ ವಿಶ್ವೇಶ್ವರಯ್ಯ, ಅವರುಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

"ಭಾರತೀಯರು ಯಾರಿಗೂ ಕಡಿಮೆ ಇಲ್ಲ. ಎಲ್ಲೆಡೆಯೂ ನಮ್ಮವರು ಉದ್ಯೋಗದಲ್ಲಿ ಉನ್ನತಿ ಹೊಂದಿದ್ದಾರೆ," ಎಂದರಲ್ಲದೆ ತಾವು ಈ ಐದು ವರ್ಷಗಳಲ್ಲಿ 114 ಸಂಸ್ಥೆಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು. ತಾವು 13 ನೇ ರಾಷ್ಟ್ರಪತಿಯಾಗಿ ಇದು ಕೊನೆಯ ಭೇಟಿಯಾದರೂ, ಮುಂದೆಯೂ ಈ ಸಂಸ್ಥೆಯೊಂದಿಗೆ ಆತ್ಮೀಯ ಸಂಬಂಧ ಹೊಂದುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಶ್ರದ್ಧೆಯುಳ್ಳ ಶಿಕ್ಷಕರ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಿಳಿಸುವವನೇ ಉತ್ತಮ ಶಿಕ್ಷಕ. ಇಲ್ಲವಾದಲ್ಲಿ ಗಣಕಯಂತ್ರಕ್ಕೂ ಶಿಕ್ಷಕರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಶಿಕ್ಷಕನು ವಿದ್ಯಾರ್ಥಿಗಳ ಜೀವನಕ್ಕೆ ಒಂದು ಆಕಾರ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಿದರೆ ಮಾತ್ರ ಅವನ ಜೀವನ ಸಾರ್ಥಕವೆನಿಸುತ್ತದೆ," ಎಂದು ಹೇಳಿದರು.

"ಎಲ್ಲರೂ ಉತ್ತಮ ಶಿಕ್ಷಕರಾಗಲಾರರು. ಇದಕ್ಕೆ ತನ್ನದೇ ಆದ ಪಾವಿತ್ರತೆ ಇದೆ. ಇದು ಮುಖ್ಯ ಉದ್ಯೋಗಗಳಲ್ಲಿ ಒಂದು. ಆದರೆ ಇಂದು ಇದಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಶಿಕ್ಷಕರಿಗೆ ತಾಳ್ಮೆ, ಸ್ಥೈರ್ಯ, ಸೌಹಾರ್ದತೆಯ ಅಂಶಗಳಿರಬೇಕು. ಮುಂದಿನ ಪೀಳಿಗೆಯವರು ಶಿಕ್ಷಕರು-ವಿದ್ಯಾರ್ಥಿಯ ಸಂಬಂಧದ ಬೆಲೆ ಅರಿತು ಮುನ್ನಡೆಯಬೇಕು. ಒಳ್ಳೆಯ ಶಿಕ್ಷಕರಿಗೆ ಮನ್ನಣೆ ದೊರೆಯಬೇಕು," ಎಂದು ಹೇಳಿದರು.
ಪಧವೀಧರರಾಗಿರುವ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, "ಯಾವುದೇ ಕ್ಷೇತ್ರವನ್ನು ಉದ್ಯೋಗದಲ್ಲಿ ಆಯ್ಕೆ ಮಾಡಿಕೊಂಡರೂ, ಈ ಸಮಾಜವನ್ನು ಉತ್ತಮ ಸ್ಥಾನದಲ್ಲಿಡುವ ಪ್ರಯತ್ನ ಮಾಡಿ. ಇಂದು ಸ್ಥಳೀಯ, ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳಿವೆ. ಬಡತನ, ಹವಾಮಾನ ಬದಲಾವಣೆ, ರೋಗರುಜಿನ ಹೀಗೆ ಇಂತಹ ಸವಾಲುಗಳನ್ನು ಸೈನಿಕರಂತೆ ಎದುರಿಸಿ ಮುನ್ನಡೆಯಿರಿ. ವಿಜ್ಞಾನ ಒಂದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಹುಡುಕಬಹುದು," ಎಂದ ಮುಖ್ಯಮಂತ್ರಿಗಳು ಸಹಕಾರ, ಸಹಾನುಭೂತಿಯ ಮೌಲ್ಯಗಳನ್ನು ಬಳಸಿಕೊಂಡು ನಿಮ್ಮ ಜೀವನದಲ್ಲಿ ಜಯಶೀಲರಾಗಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯಪಾಲರಾದ ವಜುಭಾಯಿ ರೂಢಭಾಯಿ ವಾಲಾ, "ಇಂದಿನ ಜೀವನಕ್ಕೆ ವಿಜ್ಞಾನದ ಅವಶ್ಯಕತೆ ಬಹಳವಿದೆ. ಇಸ್ರೋ ಸಂಸ್ಥೆ 104 ಉಪಗ್ರಹಗಳ ಉಡಾವಣೆ ಮಾಡಿದೆ. ಜಪಾನ್, ಇಸ್ರೇಲ್, ದಕ್ಷಿಣ ಕೊರಿಯಾ ಸಹ ಇದರಿಂದ ಪ್ರೇರಣೆ ಹೊಂದಿದೆ. ವಿಜ್ಞಾನದಲ್ಲಿ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕು. ರಾಷ್ಟ್ರಕ್ಕೆ ಈ ಸಂಶೋಧನೆಯಿಂದ ಹೆಚ್ಚು ಪ್ರಯೋಜನವಾಗಿ, ವಿಶ್ವದಲ್ಲಿ ಭಾರತೀಯರು ಹೆಚ್ಚು ಜನಪ್ರಿಯವಾಗಬೇಕು," ಎಂದರು.

ಘಟಿಕೋತ್ಸವದಲ್ಲಿ ವಿಜ್ಞಾನದಲ್ಲಿ 96 ಜನರಿಗೆ ಪದವಿ, 334 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 309 ಸಂಶೋಧಕರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಮರಾವ್, ನಿರ್ದೇಶಕರಾದ ಅನುರಾಗ್ ಕುಮಾರ್, ಡೀನ್‍ಗಳಾದ ಎಂ.ಕೆ. ಸೂರಪ್ಪ , ಅಂಜಲಿ ಕರ್ನಡೆ ಉಪಸ್ಥಿತರಿದ್ದರು.

English summary
President Pranab Mukherjee urges youth to rush in competitive world on his last speech at Indian Institute of Science, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X