ದಸರಾ ರಜೆ ರದ್ದು: ಪ್ರೆಸಿಡೆನ್ಸಿ ಪಿಯು ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

Dasara Holidays Cancelled: ಪ್ರೆಸಿಡೆನ್ಸಿ ಪದವಿ ಪೂರ್ವ (ಪಿಯು) ಕಾಲೇಜು ಆಡಳಿತ ಮಂಡಳಿಯು ದಸರಾ ಹಬ್ಬದ ರಜೆಯನ್ನು ದಿಢೀರನೆ ರದ್ದುಗೊಳಿಸಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ (ಅಕ್ಟೋಬರ್ 13) ಕಾಲೇಜಿನ ಹೆಬ್ಬಾಳ ಹಾಗೂ ಯಲಹಂಕ ಕ್ಯಾಂಪಸ್‌ಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಕಾಲೇಜು ಆಡಳಿತ ಮಂಡಳಿಯ ಈ ನಿರ್ಧಾರದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಜಮಾಯಿಸಿ, ತರಗತಿಗಳನ್ನು ಬಹಿಷ್ಕರಿಸಿ ಧರಣಿ ಕುಳಿತರು. ನಮಗೆ ದಸರಾ ರಜೆ ನೀಡಬೇಕು ಹಾಗೂ ರಾಜ್ಯ ಪಿಯು ಇಲಾಖೆಯ ಅಧಿಕೃತ ವೇಳಾಪಟ್ಟಿಯನ್ನು ಪಾಲಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

Presidency PU College Cancels Dasara Holidays Students ABVP Stage Protest in Bengaluru on Tuesday

ವಿದ್ಯಾರ್ಥಿಗಳ ಆರೋಪ ಏನು?

'ಕಾಲೇಜು ಆಡಳಿತ ಮಂಡಳಿಯು ಆರಂಭದಲ್ಲಿ ಅಕ್ಟೋಬರ್ 10 ರಿಂದ 21ರ ವರೆಗೆ ದಸರಾ ರಜೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಯಾವುದೇ ಮುನ್ಸೂಚನೆ ನೀಡದೇ ದಿಢೀರ್ ಈ ನಿರ್ಧಾರವನ್ನು ಹಿಂಪಡೆದಿದೆ,' ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

'ನಮ್ಮ ಕಾಲೇಜು ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯ ವ್ಯಾಪ್ತಿಗೆ ಒಳಪಡುತ್ತದೆ. ಪಿಯು ಇಲಾಖೆಯು ನಿಗದಿಪಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸುವುದು ಪ್ರತಿಯೊಂದು ಕಾಲೇಜಿನ ಕರ್ತವ್ಯ. ಅದನ್ನು ಬಿಟ್ಟು ಆಡಳಿತ ಮಂಡಳಿಯು ತಾನೇ ಸ್ವತಃ ನಿರ್ಧಾರ ತೆಗೆದುಕೊಂಡು ರಜೆಯನ್ನು ರದ್ದುಗೊಳಿಸಿರುವುದು ನಿಯಮಬಾಹಿರ,' ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು ಅಂತಾ ವರದಿಯಾಗಿದೆ.

ದಸರಾ ಹಬ್ಬವು ಕರ್ನಾಟಕದ ನಾಡಹಬ್ಬವಾಗಿದ್ದು, ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಊರುಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ಯೋಜಿಸಿದ್ದರು. ಆದರೆ ಕಾಲೇಜಿನ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾದಂತಾಗಿದೆ ಎನ್ನುವ ಆಕ್ರೋಶಗಳು ವ್ಯಕ್ತವಾಗಿವೆ. 'ರಜೆ ರದ್ದುಗೊಳಿಸಲು ಕಾರಣವೇನು ಎಂಬುದಕ್ಕೆ ಆಡಳಿತ ಮಂಡಳಿಯು ನಮಗೆ ಯಾವುದೇ ರೀತಿಯ ಸ್ಪಷ್ಟನೆ ಅಥವಾ ವಿವರಣೆಯನ್ನು ನೀಡಿಲ್ಲ,' ಎಂದು ಮತ್ತೊಬ್ಬ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಬೆದರಿಕೆ ಆರೋಪ

ವಿದ್ಯಾರ್ಥಿಗಳು ಈ ವಿಷಯವಾಗಿ ಸೋಮವಾರವೂ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಆಡಳಿತ ಮಂಡಳಿಯ ಪ್ರತಿನಿಧಿಗಳು ಮಂಗಳವಾರದಿಂದ ರಜೆ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ, ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸುವುದಿಲ್ಲ ಅಂತಲೂ ಹೇಳಿದ್ದರು.

ಆದರೆ ನೀಡಿದ ಭರವಸೆಗೆ ವಿರುದ್ಧವಾಗಿ ಮಂಗಳವಾರವೂ ತರಗತಿಗಳನ್ನು ಮುಂದುವರೆಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೋಷಕರಿಗೆ ದೂರವಾಣಿ ಕರೆ ಮಾಡಿರುವ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಎಬಿವಿಪಿ ಎಚ್ಚರಿಕೆ

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಬಿವಿಪಿ ಮುಖಂಡ ಮಣಿಕಂಠ ಕಳಸ ಮಾತನಾಡಿ, 'ರಾಜ್ಯದ ಎಲ್ಲಾ ಪಿಯು ಕಾಲೇಜುಗಳು ಸರ್ಕಾರದ ಅಧಿಕೃತ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಪ್ರಮುಖ ಹಿಂದೂ ಹಬ್ಬಗಳಿಗೆ ರಜೆ ನೀಡದೆ ವಿದ್ಯಾರ್ಥಿಗಳನ್ನು ನಿರಂತರವಾಗಿ ತರಗತಿಗಳಿಗೆ ಹಾಜರಾಗುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಆಡಳಿತ ಮಂಡಳಿಯು ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆದು ದಸರಾ ರಜೆ ಘೋಷಿಸಬೇಕು. ಇಲ್ಲದಿದ್ದರೆ ಬುಧವಾರವೂ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು,' ಎಂದು ಎಚ್ಚರಿಸಿದ್ದಾರೆ.

ಈ ಇಡೀ ಘಟನೆ ಹಾಗೂ ವಿದ್ಯಾರ್ಥಿಗಳ ಆರೋಪದ ಕುರಿತು ಸ್ಪಷ್ಟನೆ ಪಡೆಯಲು ಪ್ರೆಸಿಡೆನ್ಸಿ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಇದೀಗ ವಿದ್ಯಾರ್ಥಿಗಳ ಆಕ್ರೋಶ ತೀವ್ರಗೊಂಡಿದ್ದು, ಇದು ಇನ್ನೂ ಯಾವ ರೀತಿಯ ತಿರುವುಪಡೆದುಕೊಳ್ಳುತ್ತದೆಯೋ ಗೊತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+