Breaking: ಪ್ರವೀಣ್ ಹತ್ಯೆ ತನಿಖೆ ಬಗ್ಗೆ ವಿವರ ಕೊಟ್ಟ ಸಿಎಂ
ಬೆಂಗಳೂರು, ಆ.01: "ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾದ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಕೊಲೆಗಾರರ ಪತ್ತೆಯಾಗುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಬೆಂಗಳೂರಿನ ಆರ್. ಟಿ. ನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ಎನ್‌ಐಎಗೆ ಪ್ರಕರಣ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ತಾಂತ್ರಿಕ ಹಾಗೂ ಕಾಗದ ಪತ್ರಗಳ ಕೆಲಸ ಜಾರಿಯಲ್ಲಿದೆ. ಆದಷ್ಟು ಬೇಗನೆ ಪ್ರಕರಣವನ್ನು ಹಸ್ತಾಂತರ ಮಾಡಲಾಗುವುದು" ಎಂದರು.
"ಅನೌಪಚಾರಿಕವಾಗಿ ಎನ್ಐಎಗೆ ಈಗಾಗಲೇ ಪ್ರಕರಣ ಕುರಿತು ತಿಳಿಸಲಾಗಿದೆ. ಅವರು ಕೇರಳ ಮತ್ತು ಮಂಗಳೂರಿನಲ್ಲಿ ಪ್ರಾಥಮಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

"ಬೆಳ್ಳಾರೆಯಲ್ಲೇ ಹತ್ಯೆಗೀಡಾದ ಮಸೂದ್ ಹಾಗೂ ಸುರತ್ಕಲ್‌ನಲ್ಲಿ ಹತ್ಯೆಯಾದ ಮುಹಮ್ಮದ್ ಫಾಜಿಲ್ ಮನೆಗೆ ಮುಂದಿನ ದಿನಗಳಲ್ಲಿ ಭೇಟಿ ನೀಡುವುದಾಗಿ" ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಇನ್ನು, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಮತ್ತು ಕೇರಳದಿಂದ ಇನ್ನೂ 4 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಲಕ್ಷಾಂತರ ರೂಪಾಯಿ ಪರಿಹಾರ ಘೋಷಿಸಿದ್ದರು. ಜೊತೆಗೆ ತನಿಖೆಯನ್ನು ಎನ್‌ಐಗೆ ವಹಿಸಿದ್ದಾರೆ. ಆದರೆ, ಅದೇ ಊರಿನಲ್ಲಿ ಮೃತಪಟ್ಟ ಮಸೂದ್ ಮನೆಗೆ ಭೇಟಿ ನೀಡಿಲ್ಲ ಎಂದು ಸಾಮಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಮೂರು ಹತ್ಯೆ ಪ್ರಕರಣಗಳಲ್ಲಿ ರಾಜ್ಯ ಬಿಜೆಪಿ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಲಾಗಿದೆ.
Recommended Video
ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಗಳೂರಿನಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು, ಮಸೂದ್ ಮತ್ತು ಮುಹಮ್ಮದ್ ಫಾಜಿಲ್ ಅವರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ದಾರೆ. ಜೊತೆಗೆ ಎಲ್ಲರಿಗೂ ತಲಾ 5 ಲಕ್ಷ ರೂಪಾಯಿ ಧನ ಸಹಾಯದ ಚೆಕ್ ಗಳನ್ನು ಹಸ್ತಾಂತರ ಮಾಡಿದ್ದಾರೆ.












Click it and Unblock the Notifications