'ಬಡ ರೋಗಿಗಳಿಗೂ ಕ್ಯಾನ್ಸರ್ ಚಿಕಿತ್ಸೆ ಸಿಗುವಂತಾಗಬೇಕು'
ಬೆಂಗಳೂರು, ಡಿಸೆಂಬರ್ 23 : 'ಕ್ಯಾನ್ಸರ್ ರೋಗದ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಡ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಬಡ ರೋಗಿಗಳಿಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಬೇಕು' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ಬುಧವಾರ ಕಿದ್ವಾಯಿ ಆಸ್ಪತ್ರೆಯಲ್ಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ರಾಷ್ಟ್ರಪತಿಗಳು, 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ದೇಶದಲ್ಲಿ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು. [ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಕಿಚ್ಚುಹಚ್ಚಿದ ಸಂಗೀತ!]

'ಕ್ಯಾನ್ಸರ್ ರೋಗದಿಂದ ಬಳುತ್ತಿರುವವರಿಗೆ ಆಧುನಿಕ ಚಿಕಿತ್ಸಾ ವ್ಯವಸ್ಥೆಯ ಮೂಲಕ ಅಗ್ಗದ ದರದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು' ಎಂದು ಆಶಯ ವ್ಯಕ್ತಪಡಿಸಿದ ಪ್ರಣಬ್ ಮುಖರ್ಜಿ ಅವರು, 'ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರಗಳು ಮಾಡಬೇಕು' ಎಂದು ಕರೆ ನೀಡಿದರು. [ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!]
'ಕ್ಯಾನ್ಸರ್ ರೋಗದ ಚಿಕಿತ್ಸೆ ದುಬಾರಿಯಾಗಿದ್ದು, ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಬಡ ರೋಗಿಗಳಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು. ಸರ್ಕಾರಗಳು ಕ್ಯಾನ್ಸರ್ ರೋಗ ತಪಾಸಣೆ ಶಿಬಿರಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು' ಎಂದು ರಾಷ್ಟ್ರಪತಿಗಳು ಹೇಳಿದರು.

ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications