ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ ಔಟ್ ಗ್ಯಾರಂಟಿ?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 66 ಸ್ಥಾನ ಪಡೆದು ಭೀಕರ ಸೋಲು ಕಂಡಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ & ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಆದರೆ ಇದೇ ವೇಳೆ ಕಟೀಲ್ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಹಿಂಟ್ ಕೂಡ ಸಿಕ್ಕಿದೆ.
ನಳಿನ್ ಕುಮಾರ್ ಕಟೀಲ್ ನೀಡಿದ್ದ ಕೆಲವು ಹೇಳಿಕೆಗಳು ಬಿಜೆಪಿಗೆ ಮುಳುವಾಗಿತ್ತು ಎಂಬ ಆರೋಪವಿದೆ. ಇದೇ ಹಿನ್ನೆಲೆ ಕಟೀಲ್ ವಿರುದ್ಧ ಆಕ್ರೋಶ ಕೂಡ ತೀವ್ರಗೊಂಡಿದೆ. ಇನ್ನೊಂದ್ಕಡೆ ವಿಪಕ್ಷಗಳ ನಾಯಕರೂ ಕಟೀಲ್ ವಿರುದ್ಧ ರಾಜೀನಾಮೆ ಬಾಣ ಪ್ರಯೋಗಿಸುತ್ತಿದ್ದಾರೆ. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಟೀಲ್ ಬದಲಾವಣೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಆದರೆ ಆ ಬಗ್ಗೆ ಸೂಕ್ತವಾದ ಸ್ಪಷ್ಟನೆಯನ್ನ ಪ್ರಲ್ಹಾದ್ ಜೋಶಿ ಅವರು ನೀಡಿದ್ದು, ಅದರ ಸಂಪೂರ್ಣ ಮಾಹಿತಿಯನ್ನ ನಾವು ಇಲ್ಲಿ ತಿಳಿಯೋಣ.

ಕಟೀಲ್ ಕೆಳಗೆ ಇಳಿಯೋದು ಗ್ಯಾರಂಟಿ?
ಪಕ್ಷಕ್ಕೆ ಸೋಲಾದ ಕಾರಣ ನಳಿನ್ ಕುಮಾರ್ ಕಟೀಲ್ ಅವರನ್ನ ಕೆಳಗಿಳಿಸಬೇಕು ಅನ್ನೋ ರೀತಿ ಚರ್ಚೆ ನಡೆದಿಲ್ಲ. ಆದರೆ ಕಟೀಲ್ ಅವರ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿದಿದೆ. ಅವಧಿ ಮುಗಿದ ಸಂದರ್ಭದಲ್ಲಿ ಚುನಾವಣೆಯೂ ಎದುರಾದ ಕಾರಣ ರಾಷ್ಟ್ರೀಯ ನಾಯಕರು ಕಟೀಲ್‌ಗೆ ಕೆಲ ಜವಾಬ್ದಾರಿ ನೀಡಿದ್ದರು. ಈಗ ಚುನಾವಣೆ ಮುಗಿದಿದೆ, ರಾಜ್ಯಧ್ಯಕ್ಷರ ಬದಲಾವಣೆ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರೇ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಸೋಲಿನ ಬಗ್ಗೆ ಆತ್ಮಾವಲೋಕನ
ರಾಜಧಾನಿ ಬೆಂಗಳೂರಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಪ್ರಲ್ಹಾದ್ ಜೋಶಿ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿಗೆ ನಿರಾಶಾದಾಯಕ ಫಲಿತಾಂಶ ಬಂದಿರುವುದು ನಿಜ. ಈ ಕುರಿತು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ. ಇಂಥಹ ಸಂದರ್ಭವನ್ನ ನಾಯಕರು ಸವಾಲಾಗಿ ಸ್ವೀಕರಿಸಿದ್ದು, ಪುಟಿದೇಳುವ ನಿರ್ಧಾರಕ್ಕೆ ಬಂದಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆ ಪಕ್ಷ ಸಂಘಟಿಸಿಕೊಂಡು ಉತ್ತಮವಾದ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗೆ ಶ್ಲಾಘನೆ
ಬೆಂಗಳೂರಲ್ಲಿ ಇಂದು 5ನೇ ಆವೃತ್ತಿ ರೋಜ್‌ಗಾರ್ ಮೇಳ ಉದ್ಘಾಟಿಸಿ ಮಾತನಾಡಿದ ಪ್ರಲ್ಹಾದ್ ಜೋಶಿ, ಕೋವಿಡ್ ಬಳಿಕ ಜಗತ್ತಿನಲ್ಲೇ ಹೆಚ್ಚು ಉದ್ಯೋಗಗಳನ್ನ ಭಾರತ ಸೃಷ್ಟಿಸಿದೆ ಎಂದರು. ದೇಶದಲ್ಲಿ ಇಂದು ಏಕಕಾಲಕ್ಕೆ 71,000 ಯುವಕ/ಯುವತಿಯರಿಗೆ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಈವರೆಗೂ ಒಟ್ಟು 3.6 ಲಕ್ಷ ಜನರಿಗೆ ಉದ್ಯೋಗ ನೇಮಕಾತಿ ಮಾಡುವ ಮೂಲಕ, ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರಕಾರ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಜೋಶಿ ಸಂತಸ ವ್ಯಕ್ತಪಡಿಸಿದರು.

3ನೇ ಅತಿದೊಡ್ಡ ದೇಶವಾಗಬೇಕು
ಕೇಂದ್ರಸರ್ಕಾರ ರೋಜ್‌ಗಾರ್ ಮೇಳದ ಮೂಲಕ ಯುವಕ/ಯುವತಿಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರದ ಉತ್ತಮ ಆರ್ಥಿಕ ನೀತಿಗಳಿಂದ ಖಾಸಗಿ ವಲಯದಲ್ಲೂ ಭಾರತದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಭಾರತ ಜಗತ್ತಿನಲ್ಲಿ ಬ್ರಿಟನ್ ಹಿಂದೆ ಹಾಕಿ ಜಗತ್ತಿನಲ್ಲೇ 5ನೇ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಮುಂಬರುವ ದಿನದಲ್ಲಿ ಜಗತ್ತಿನಲ್ಲೇ ಭಾರತ 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಒಟ್ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಕೆಲ ದಿನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆಗೆ ಮುನ್ಸೂಚನೆ ಸಿಕ್ಕಿದೆ. ಅಲ್ಲದೆ ಈ ಬಗ್ಗೆ ಕೇಂದ್ರ ಸಚಿವರೇ ಸುಳಿವು ನೀಡಿ ಮತ್ತೊಂದ್ಕಡೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅಕಸ್ಮಾತ್ ಬಿಜೆಪಿ ಕೇಂದ್ರ ನಾಯಕರು ಕಟೀಲ್ ಸ್ಥಾನ ಬದಲಾಯಿಸಿದರೆ, ಈ ಸ್ಥಾನವನ್ನ ಮುಂದೆ ಬಿಜೆಪಿಯಲ್ಲಿರುವ ಯಾವ ನಾಯಕನಿಗೆ ನೀಡುತ್ತಾರೆ? ಎಂಬುದೇ ಕುತೂಹಲದ ಸಂಗತಿ. ಈ ಪ್ರಶ್ನೆಗೆ ಇನ್ನೂ ಕೆಲವೇ ದಿನದಲ್ಲಿ ಉತ್ತರ ಸಿಗೋದು ಗ್ಯಾರಂಟಿ.












Click it and Unblock the Notifications