ಬೆಂಗಳೂರು ಸೆಂಟ್ರಲ್ ಕ್ಷೇತ್ರ ಸುತ್ತಾಡಿ ಪ್ರಣಾಳಿಕೆ ತಯಾರಿಸಲಿದ್ದಾರೆ ಪ್ರಕಾಶ್ ರೈ
ಬೆಂಗಳೂರು, ಜನವರಿ 19: ಬೆಂಗಳೂರು ಸೆಂಟ್ರಲ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ನಟ ಪ್ರಕಾಶ್ ರೈ ಹತ್ತು ದಿನಗಳ ಕಾಲ ಜನರ ಮಧ್ಯೆ ಕಳೆದು ಜನಪರ ಪ್ರಣಾಳಿಕೆ ತಯಾರಿಸಲಿದ್ದಾರೆ.
ಇಂದು ಪ್ರೆಸ್‌ಕ್ಲಬ್‌ನಲ್ಲಿ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಜೊತೆ ಇದ್ದು ಅವರೊಂದಿಗೆ ಒಡನಾಡಿ ಅವರಿಗೆ ಅವಶ್ಯಕವಾದುದ್ದೇನು ಎಂಬುದನ್ನು ಮನಗಂಡು ಕ್ಷೇತ್ರಕ್ಕೆ ಸೂಕ್ತವಾದ ಪ್ರಣಾಳಿಕೆ ಸಿದ್ಧಪಡಿಸುತ್ತೇನೆ ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳನ್ನೇಕೆ ಸೇರಲಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ಯಾವುದೇ ಪಕ್ಷದಲ್ಲೂ ಮೂರು ದಿನಗಳಿಗಿಂತ ಹೆಚ್ಚು ನಾನು ಉಳಿಯಲಾರೆನು. ಎಲ್ಲಾ ಪಕ್ಷಗಳು ಲೋಕಸಭೆಗೆ ಸೇರಿದ ಮೇಲೆ ಒಂದೇ ಪಕ್ಷವಾಗಿಬಿಡುತ್ತಾರೆ ಎಂದು ಅವರು ರಾಜಕಾರಣ ವ್ಯವಸ್ಥೆಯನ್ನು ಟೀಕಿಸಿದರು.
ಕಳೆದ ಎರಡು-ಮೂರು ವರ್ಷಗಳಿಂದ ನಾನು ನಟನಾಗಿ ಮಾತ್ರವೇ ಇಲ್ಲ. ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ, ಸಾಮಾನ್ಯ ವ್ಯಕ್ತಿಯಾಗಿ ಆ ಪ್ರಶ್ನೆಗಳನ್ನು ನಾನು ಕೇಳುತ್ತಿದ್ದೇನೆ. ಅದೇ ಕಾರ್ಯವನ್ನು ನಾನು ಚುನಾವಣೆಯಲ್ಲಿ ಗೆದ್ದು ಲೋಕಸಭೆಯಲ್ಲೂ ಸಾಮಾನ್ಯ ವ್ಯಕ್ತಿಯನ್ನು ಪ್ರತಿನಿಧಿಸಲಿದ್ದೇನೆ ಹಾಗಾಗಿ ಪಕ್ಷೇತರವಾಗಿ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದರು.
ಪಾರ್ಲಿಮೆಂಟ್‌ನಲ್ಲಿ ಪ್ರಜೆ ಹೆಸರಿನಲ್ಲಿ ಪ್ರಚಾರವನ್ನು ನಡೆಸಲಿರುವ ಪ್ರಕಾಶ್ ರೈ ಅವರು ಇನ್ನು ನಾಲ್ಕು ತಿಂಗಳ ಕಾಲ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪರಿಭ್ರಮಣೆ ನಡೆಸಲಿದ್ದಾರಂತೆ. ಮೊದಲ ಭಾಗವಾಗಿ ಹತ್ತು ದಿನ ಕ್ಷೇತ್ರದಲ್ಲಿ ಅಡ್ಡಾಡಿ ಜನರೊಂದಿಗೆ ಮಾತನಾಡಿ ಪ್ರಣಾಳಿಕೆ ಸಿದ್ದಪಡಿಸಲಿದ್ದಾರೆ.
ನಾನು ಈ ದೇಶದ ಪ್ರಜೆ, ಓದಿಕೊಂಡಿದ್ದೇನೆ, ಹಲವು ದೇಶಗಳನ್ನು ಸುತ್ತಿದ್ದೇನೆ, ಸಾಹಿತ್ಯದ ಗಂಧ-ಗಾಳಿ ಗೊತ್ತಿದೆ, ರಾಜಕೀಯವನ್ನು ಗಮಿಸಿದ ಅನುಭವ ಇದೆ, ಸತತವಾಗಿ, ಜನಪರವಾಗಿ ನಿಂತಿದ್ದೇನೆ ನಾನು ಇವೆಲ್ಲವೂ ನಾನು ಚುನಾವಣೆಗೆ ನಿಲ್ಲಲು ಅರ್ಹತೆಗಳು ಎಂದು ಅವರು ತಾವು ಚುನಾವಣೆಗೆ ನಿಂತಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications