Bengaluru: ಬೆಂಗಳೂರು ಉದ್ಧಾರ ಮಾಡಿದ್ದು ನಾವು ಎನ್ನುವ ವಲಸಿಗರಿಗೆ ಪ್ರಕಾಶ್ ಬೆಳವಾಡಿ ಹೇಳಿದ್ದಿಷ್ಟು
ಸ್ಥಳೀಯರು, ವಲಸಿಗರು ಎನ್ನುವ ವಿವಾದ ಆಗಾಗ್ಗೆ ಬೆಂಗಳೂರಿನಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಕನ್ನಡ ಭಾಷೆಯ ವಿಚಾರಕ್ಕೆ ವಲಸಿಗರು ತೋರುವ ನಿರ್ಲಕ್ಷ್ಯ ಧೋರಣೆ, ಸ್ಥಳೀಯರಲ್ಲಿ ಸಿಟ್ಟು ತರಿಸುತ್ತದೆ ಇದು ಕೆಲವೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಗೂ ಕಾರಣವಾಗುತ್ತದೆ. ಕೆಲವು ಉತ್ತರ ಭಾರತೀಯರು ಮತ್ತು ವಿವಿಧ ರಾಜ್ಯಗಳ ವಲಸಿಗರು, ನಮ್ಮಿಂದಲೇ ಬೆಂಗಳೂರು ಅಭಿವೃದ್ಧಿಯಾಗಿದ್ದು, ವಲಸಿಗರು ಇಲ್ಲದೇ ಇದ್ದರೆ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದು ವಾದ ಮಾಡುತ್ತಾರೆ.
ನಟ ಮತ್ತು ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಮಹಾನಗರವಾಗಿ ಬೆಳೆಯಲು ಹೊರಗಿನವರು ಯಾರೂ ಕೊಡುಗೆ ನೀಡಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಅವರಿಗೆ ಬೆಳೆಯಲು ಅವಕಾಶ ಕೊಟ್ಟಿದೆ, ಅವರಿಂದ ಬೆಂಗಳೂರು ಉದ್ದಾರವಾಗಿಲ್ಲ ಎಂದಿದ್ದಾರೆ.

ಯೂಟ್ಯೂಬ್ ಚಾನೆಲ್ ಸ್ಕಾಂಡಿಮ್ಯಾನ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಬೆಳವಾಡಿ, ಬೆಂಗಳೂರಿನ ಹೊರಗಿನ ಜನರು ನಗರದ ಅಭಿವೃದ್ಧಿಗೆ ನಾವೇ ಕಾರಣ ಎಂದು ಅದೇಗೆ ಹೇಳುತ್ತಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಇಷ್ಟ ಆಯ್ತು ಪ್ರಕಾಶ್ ಬೆಳವಾಡಿ ಅವರೇ 👌 pic.twitter.com/mpXsWgA7Lv
— Goudrusarkar - ಗೌಡ್ರುಸರ್ಕಾರ್ (@Gs_0107) August 21, 2024
ಕೆಲಸಕ್ಕಾಗಿ ಬರುವವರು ಉದ್ದಾರ ಆಗುತ್ತಾರೆ
ಬೆಂಗಳೂರಿಗೆ ಬಹಳಷ್ಟು ಹೊರಗಿನವರು ಕೆಲಸಕ್ಕಾಗಿ ವಲಸೆ ಬರುತ್ತಾರೆ, ಇಲ್ಲಿಗೆ ಬಂದ ಬಳಿಕ ಬೆಂಗಳೂರು ಅದ್ಭುತವಾಗಿದೆ ಎಂದು ಹೇಳುವುದನ್ನು ನಾನು ನೋಡುತ್ತೇನೆ. ಆದರೆ ವಾಸ್ತವ ಎಂದರೆ ಅವರು ಬರುವ ಮೊದಲೇ ಬೆಂಗಳೂರು ಮಹಾನಗರವಾಗಿತ್ತು, ನಾವು ಬಂದಮೇಲೆ ಬೆಂಗಳೂರು ಅಭಿವೃದ್ಧಿಯಾಗಿದೆ ಎಂದು ಕೆಲವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ, ಅವರು ಬೇಕಾದರೆ ನಗರವನ್ನು ಬಿಟ್ಟುಹೋಗಬಹುದು, ಬೆಂಗಳೂರು ಇನ್ನೂ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿಯಾಗಿದ್ದೇ ನಮ್ಮಿಂದ ಎಂದು ಕೆಲವು ಉತ್ತರ ಭಾರತೀಯರು ಹೇಳುತ್ತಾರೆ, ಅವರು ನಗರವನ್ನು ತೊರೆದು ಅವರ ಊರಿಗೆ ಹೋಗಿ ಉದ್ಧಾರ ಮಾಡಬಹುದು. ಉತ್ತರ ಭಾರತೀಯರನ್ನು ಬೆಂಗಳೂರಿಗೆ ಯಾಕೆ ಬಂದಿದ್ಧೀರಿ ಎಂದು ಕೇಳಿದ್ದಕ್ಕೆ, ಇಲ್ಲಿ ಉತ್ತಮ ಅವಕಾಶಗಳಿವೆ ಎಂದು ಹೇಳುತ್ತಾರೆ, ಹಾಗಾದರೆ ಇಲ್ಲಿ ಅವಕಾಶಗಳನ್ನು ಸೃಷ್ಟಿಸಿದವರು ಯಾರು? ಅನವಶ್ಯಕವಾಗಿ ಮಾತನಾಡುವ ಮುನ್ನ ಅದನ್ನು ಅವರು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರು ಬಿಟ್ಟು ಹೋಗಲ್ಲ
ನನಗೆ ಬೇರೆ ದೇಶದಲ್ಲಿ ನೆಲೆಸುತ್ತೀರಾ ಎಂದು ಸಾಕಷ್ಟು ಜನ ಕೇಳುತ್ತಾರೆ. ನನ್ನ ಪ್ರದರ್ಶನಗಳಿಗಾಗಿ ನಾನಯ ವಿವಿಧ ದೇಶ, ನಗರಗಳಿಗೆ ಪ್ರಯಾಣ ಮಾಡುತ್ತೇನೆ. ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಾಲ ಇದ್ದೆ, ಬೇರೆ ದೇಶವಲ್ಲ, ನಾನು ಬೆಂಗಳೂರು ಬಿಟ್ಟು ಬೇರೊಂದು ನಗರದಲ್ಲಿ ಕೂಡ ನೆಲೆಸುವುದಿಲ್ಲ, ಈ ನಗರವನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರ ಬಗ್ಗೆಯೂ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ನಾನು ಬಹಳಷ್ಟು ಮಲಯಾಳಿಗಳನ್ನು ನೋಡುತ್ತೇನೆ. ಅವರು ಕೇರಳವನ್ನು ದೇವರ ನಾಡು ಎಂದು ಕರೆಯುತ್ತಾರೆ. ಆದರೆ ಅಂತಹ ದೇವರ ನಾಡನ್ನು ಬಿಟ್ಟು ನಮ್ಮೂರಿಗೆ ಯಾಕೆ ಬಂದರು ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications