ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸಮನ್ಸ್: ಸಂಸದ ಸ್ಥಾನಕ್ಕೆ ಆಪತ್ತು?
Recommended Video
ಬೆಂಗಳೂರು, ಜುಲೈ 26: ಜೆಡಿಎಸ್‌ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ಸಮನ್ಸ್ ನೀಡಿದ್ದು, ಚುನಾವಣೆ ಸಮಯದಲ್ಲಿ ನೀಡಿದ್ದ ಆಸ್ತಿ ಮಾಹಿತಿ ಬಗ್ಗೆ ಮಾಹಿತಿ ಕೇಳಿದೆ.
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಎದುರು ಪರಾಜಿತವಾಗಿರುವ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪ್ರಜ್ವಲ್ ರೇವಣ್ಣ ಅವರು ನಾಮಪತ್ರದ ವೇಳೆ ಆಸ್ತಿ ಕುರಿತು ಮಾಹಿತಿಯನ್ನು ಚುನಾವಣಾ ಆಯೋಗದಿಂದ ಬಚ್ಚಿಟ್ಟಿದ್ದಾರೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರ ವಿಚಾರಣೆ ನಡೆದು ಈಗ ಸಮನ್ಸ್ ಜಾರಿ ಆಗಿದೆ.

ಸಂಸದ ಪ್ರಜ್ವಲ್ ರೇವಣ್ಣ ಅವರು ಆಗಸ್ಟ್ 18 ರಂದು ಖುದ್ದು ಹಾಜರಾಗಿ ಉತ್ತರ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಅದಾಗದಿದ್ದಲ್ಲಿ ವಕೀಲರ ಮೂಲಕ ಸ್ಪಷ್ಟನೆ ಕೊಡಿಸುವಂತೆ ನ್ಯಾಯಾಲಯ ಹೇಳಿದೆ.
'ಸಂಸದ ಪ್ರಜ್ವಲ್ ರೇವಣ್ಣ ಅವರು, 2019 ರ ಲೋಕಸಭೆ ಚುನಾವಣೆ ವೇಳೆ ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಸಿದಾಗ ನೀಡಿದ್ದ ದಾಖಲೆಗಳನ್ನು ಮತ್ತು ಚುನಾವಣಾ ವೆಚ್ಚದ ಮಾಹಿತಿಯನ್ನು ಜುಲೈ 3 ರ ಒಳಗಾಗಿ ನೀಡಬೇಕು' ಎಂದು ಹೈಕೋರ್ಟ್, ಹಾಸನ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಕಳೆದ ಬಾರಿಯೂ ಇಂತಹುದೇ ಸಮನ್ಸ್ ಅನ್ನು ನೀಡಲಾಗಿತ್ತು, ಆಗ ಉತ್ತರಿಸಿದ್ದ ಜಿಲ್ಲಾಧಿಕಾರಿಗಳು, ಕಡತಗಳು ಖಜಾನೆಯಲ್ಲಿ ಸುರಕ್ಷಿತವಾಗಿದ್ದು, ತ್ವರಿತವಾಗಿ ನೀಡಲಾಗದು ಎಂದು ಉತ್ತರ ನೀಡಿದ್ದರು.
ಅಕಸ್ಮಾತ್ ಎ.ಮಂಜು ಅವರು ದಾವೆ ಹೂಡಿರುವಂತೆ ಪ್ರಜ್ವಲ್ ರೇವಣ್ಣ ಅವರು ಆಸ್ತಿ ವಿವರವನ್ನು ಚುನಾವಣಾ ಆಯೋಗದಿಂದ ಮುಚ್ಚಿಟ್ಟಿದ್ದಾರೆ ಎಂದು ಸಾಬೀತಾದಲ್ಲಿ ಪ್ರಜ್ವಲ್ ರೇವಣ್ಣ ಅವರ ಸಂಸತ್ ಸ್ಥಾನ ಅನರ್ಹಗೊಳ್ಳುವ ಭೀತಿ ಇದೆ.












Click it and Unblock the Notifications