ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ಮೂವರು ಇಂಜಿನಿಯರ್ ಅಮಾನತು
ಬೆಂಗಳೂರು, ನವೆಂಬರ್ 08 : ನೀಡಿದ ಗಡುವಿನೊಳಗೆ ರಸ್ತೆ ಗುಂಡಿ ಮುಚ್ಚಲು ವಿಫಲವಾದ ಮೂವರು ಇಂಜಿನಿಯರ್‌ಗಳನ್ನು ಬಿಬಿಎಂಪಿ ಅಮಾನತು ಮಾಡಿದೆ. ನವೆಂಬರ್ 6ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮೂವರು ಇಂಜಿನಿಯರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯಲೋಪದಡಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ಉಪ ಆಯುಕ್ತರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸಿ.ವಿ.ರಾಮನ್ ನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮೃತ್ ಕುಮಾರ್ ಸಾಲಂಕಿ, ಶಿವಾಜಿನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೈಫುದ್ದೀನ್, ಬಾಣಸವಾಡಿ ವಾರ್ಡ್ ಸಹಾಯಕ ಇಂಜಿನಿಯರ್ ಮಲ್ಲಿನಾಥ್ ಮಲ್ಕಾಪುರೆ ಅಮಾನತುಗೊಂಡವರು.
ನವೆಂಬರ್ 6ರೊಳಗೆ ನಗರದ ರಸ್ತೆಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ನ.7ರಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಮರ್ಪಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ, ಅಮಾನತು ಮಾಡಲಾಗಿದೆ.
ಮೂರು ತಂಡಗಳ ರಚನೆ : ರಸ್ತೆ ಗುಂಡಿಗಳನ್ನು ಮುಚ್ಚಿರುವ ಕುರಿತು ಪರಿಶೀಲನೆ ನಡೆಸಲು ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಮೇಯರ್, ಬಿಬಿಎಂಪಿ ಆಯುಕ್ತ, ವಿಶೇಷ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ.
ಬುಧವಾರದಿಂದಲೇ ಈ ತಂಡಗಳು ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಲಿವೆ. ಈ ಸಮಯದಲ್ಲಿ ಗುಂಡಿ ಮುಚ್ಚದೇ ಇರುವುದು ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.












Click it and Unblock the Notifications