ಚುನಾವಣೆಯತ್ತ ಮುಖ ಮಾಡಿದ ಆಧಾರ್ ನಿಲೇಕಣಿ?

ಇನ್ನೇನು 'ಆಧಾರ್' ಗುರುತಿನ ಚೀಟಿ ನೋಂದಣಿ ಬಹುತೇಕ ಅವಸಾನದ ಅಂಚಿಗೆ ಬಂದಿದ್ದು, ನಿಲೇಕಣಿ ರಾಜಕೀಯ ಆಶ್ರಯ ಪಡೆಯಲು ಆಲೋಚಿಸುತ್ತಿರುವುದು ಸಹಜವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಏನಪ್ಪಾ ಅಂದರೆ PTIಗೆ ನೀಡಿರುವ ಚುಟುಕು ಸಂದರ್ಶನದಲ್ಲಿ Unique Identification Authority of India (UIDAI) ಅಧ್ಯಕ್ಷ ನಂದನ್ ನಿಲೇಕಣಿ ಅವರು ಆಧಾರ್ ನೋಂದಣಿ ಕಾರ್ಯ ಮುಗಿಯುತ್ತಾ ಬಂದಿದ್ದು, ಅದಾಗುತ್ತಿದ್ದಂತೆ ಅಧಿಕೃತವಾಗಿ ಸರಕಾರದ ಮಟ್ಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
'ಉತ್ತಮ ಕಾರ್ಪೊರೇಟ್ ಹಿನ್ನೆಲೆ ಹೊಂದಿರುವ ತನಗೆ ರಾಜಕಾರಣಿಯಾಗಿ ಬದಲಾಗುದರಲ್ಲಿ ಅಂತಹ ಕಷ್ಟವೇನೂ ಆಗಲಾರದು. ಕೆಲವೊಂದು ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡರೆ ಸಾಕಾದೀತು' ಎಂದಿದ್ದಾರೆ.
ಅಂದಹಾಗೆ 58 ವರ್ಷದ ನಂದನ್ ನಿಲೇಕಣಿ ಸದ್ಯಕ್ಕೆ ಮತ್ತೊಂದು ಪುಸ್ತಕ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಆ ಪುಸ್ತಕದಲ್ಲೂ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸಿರುವ ನಿಲೇಕಣಿ, ತಂತ್ರಜ್ಞಾನ ಮತ್ತು ಸರಕಾರದ ಸಮ್ಮಿಳನದ ಬಗ್ಗೆ ಮಾತನಾಡಿದ್ದಾರೆ.
ಒಂದು ತಿಂಗಳ ಹಿಂದೆ, ಇನ್ಫೋಸಿಸ್ ಕಂಪನಿ ಸಂಸ್ಥಾಪಕರಲ್ಲಿ ಒಬ್ಬರಾದ ಕನ್ನಡದವರೇ ಆದ ನಿಲೇಕಣಿ ಅವರು ರಾಜಕೀಯ ಪ್ರವೇಶಿಸಲು ಮುಂದಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಲೆಕ್ಕಾಚಾರದಲ್ಲಿ ಜಾತಿ ಲೆಕ್ಕಾಚಾರದಲ್ಲೂ ಬಿಜೆಪಿಗೆ ಸಮ ಸ್ಪರ್ಧೆಯೊಡ್ಡಲು ಕಾಂಗ್ರೆಸ್ ನಿರ್ಧರಿಸಿದ್ದು, ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಅನಂತ ಕುಮಾರ್ ವಿರುದ್ಧ ನಿಲೇಕಣಿ ಅವರನ್ನು ಕಣಕ್ಕಿಳಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿತ್ತು.












Click it and Unblock the Notifications