ಬದಲಾವಣೆಗೆ ರಾಜಕೀಯ ಉತ್ತಮ ವೇದಿಕೆ : ನಿಲೇಕಣಿ
ಬೆಂಗಳೂರು, ಜ. 10 : "ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ನನ್ನ ಕನಸು. ಸಮಾಜದಲ್ಲಿ ಬದಲಾವಣೆ ತರಲು ರಾಜಕೀಯಕ್ಕಿಂತ ಉತ್ತಮವಾದ ಮತ್ತು ಪರಿಣಾಮಕಾರಿಯಾದ ವೇದಿಕೆ ಇನ್ನೊಂದಿಲ್ಲ. ಅದಕ್ಕಾಗಿಯೇ ರಾಜಕೀಯಕ್ಕೆ ಧುಮುಕಿದ್ದೇನೆ. ಇದರಲ್ಲಿ ಇಂದಿನ ಯುವಜನತೆ ಕೂಡ ಅತ್ಯಂತ ಪ್ರಮುಖ ಪಾತ್ರವಹಿಸಬೇಕಾಗುತ್ತದೆ. ನನ್ನ ಜೊತೆ ಯುವಕರು ಕೈಜೋಡಿಸುತ್ತಾರೆಂದು ಆಶಿಸುತ್ತೇನೆ."
ಇವು ಜ.10ರ ಶುಕ್ರವಾರ ಮಧ್ಯಾಹ್ನ ಕ್ರೈಸ್ಟ್ ಕಾಲೇಜಿನ ಕಿಕ್ಕಿರಿದು ತುಂಬಿದ್ದ ಬೃಹತ್ ಸಭಾಂಗಣದಲ್ಲಿ, ದೇಶಕ್ಕೆ ಆಧಾರ್ ಗುರುತಿನ ಚೀಟಿಯನ್ನು ನೀಡಿರುವ, ಕಾಂಗ್ರೆಸ್ ಪಕ್ಷದ ಮುಖಾಂತರ ರಾಜಕೀಯಕ್ಕೆ ಧುಮುಕಿರುವ 58 ವರ್ಷದ ನಂದನ್ ನಿಲೇಕಣಿ ಅವರ ನಿಖರವಾದ ಮಾತು. ಆದರೆ, ಈ ಬದಲಾವಣೆ ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದು ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಅವರು ಒತ್ತಿ ಹೇಳಿದರು.
ಬಿಗುಮಾನ ತೋರದೆ ಸಭಾಂಗಣ ಹೊರಗೆ ಯುವಕರು ಕೇಳಿದ ಪ್ರಶ್ನೆಗಳಿಗೆ ನಗುತ್ತಲೇ ಉತ್ತರ ನೀಡಿದ, ಲಿಫ್ಟ್ ಇದ್ದರೂ ಪತ್ನಿ ರೋಹಿಣಿ ಅವರು ಮಾತಿಗೆ ಹೂಂಗುಟ್ಟಿ ಮೂರನೇ ಮಹಡಿಯನ್ನು ಮೆಟ್ಟಿಲ ಮುಖಾಂತರ ಏರಿದ, ಪ್ರೆಸ್ ಎಂದು ಬರೆದ ಸ್ಟಾಂಡ್ ಬಿದ್ದಿದ್ದನ್ನು ನೋಡಿ ತಾವೇ ನಿಲ್ಲಿಸಿದ, ಆಯೋಜಕರು ಲಾಸ್ಟ್ ಕ್ವೆಶ್ಚನ್ ಅನ್ನುತ್ತಿದ್ದರೂ ಅವರನ್ನೇಕೆ ತಡೆಯುತ್ತೀರಿ ಎಂದು ಆಗ್ರಹಿಸಿದ, ಹಲವಾರು ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿದ ಕನ್ನಡಿಗ ನಂದನ್ ನಿಲೇಕಣಿ ಅವರ ಮಾತು ಮತ್ತು ಅವರೊಂದಿಗೆ ನಡೆಸಿದ ಮಾತುಕತೆಗಳು ಮುಂದಿವೆ.

ನಾನೂ ಅತ್ಯಂತ ಸಾಧಾರಣ ಹುಡುಗನಾಗಿದ್ದೆ
ಮಧ್ಯಮ ವರ್ಗದಿಂದ ಬಂದಿದ್ದರೂ ಐಐಟಿ-ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿ, ಇನ್ಫೋಸಿಸ್ ಸ್ಥಾಪಿಸಿ, ಆಧಾರ್ ಗುರುತಿನ ಚೀಟಿಯನ್ನು ದೇಶಕ್ಕೆ ನೀಡಿ, ಬೆಂಗಳೂರಿನ ಅಭಿವೃದ್ಧಿಗೆ ಬಿಎಟಿಎಫ್ ಮುಖಾಂತರ ಶ್ರಮಿಸಿ ಸಾಕಷ್ಟು ಸಾಧಿಸಿದ್ದೇನೆ ಎಂಬ ಸಂತೃಪ್ತಿಯಿದೆ. ಆದರೆ ನೆನಪಿಡಿ, ವಿದ್ಯಾರ್ಥಿಯಾಗಿದ್ದಾಗ ಕೂಡ ನಾನೂ ಅತ್ಯಂತ ಸಾಧಾರಣ ಹುಡುಗನಾಗಿದ್ದೆ. ಆದರೆ, ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದರಿಂದ ಇಷ್ಟೆಲ್ಲ ಸಾಧಿಸಲು ಸಾಧ್ಯವಾಯಿತು ಎಂದು ಅವರು ವಿದ್ಯಾರ್ಥಿಯಾಗಿದ್ದಾಗಿನಿಂದ ತಾವು ನಡೆದುಬಂದ ಹಾದಿಯನ್ನು, ಎದುರಿಸಿದ ಅಡೆತಡೆಗಳನ್ನು ಮೆಲುಕು ಹಾಕಿದರು.

ಸಾಮಾನ್ಯ ಅಸಾಧಾರಣ ಸಾಧನೆ ಮಾಡಲು ಸಾಧ್ಯ
ಯಾರೇ ಆಗಲಿ ಅವಕಾಶ ಸಿಕ್ಕಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಅಂತಹ ಅವಕಾಶಗಳನ್ನು ಇಂದಿನ ಯುವಜನತೆಗೆ ದೊರಕಿಸಿ ಕೊಡಬೇಕಾಗಿದೆ. ಒಬ್ಬ ಸಾಮಾನ್ಯ ಕೂಡ ಅಸಾಧ್ಯವಾದ ಸಾಧನೆ ಮಾಡಬೇಕಾದರೆ, ಅದಕ್ಕಾಗಿ ತ್ಯಾಗ ಮಾಡಲು, ರಿಸ್ಕ್ ತೆಗೆದುಕೊಳ್ಳಲು, ಎಲ್ಲರಿಗಿಂತ ವಿಭಿನ್ನವಾಗಿ ಚಿಂತಿಸಲು ಸಿದ್ಧನಾಗಿರಬೇಕು. ಉತ್ತಮ ವಿದ್ಯಾಭ್ಯಾಸ ಮತ್ತು ಅದೃಷ್ಟದ ಜೊತೆಗೆ, ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡಬೇಕು. ಆದರೆ ಎಲ್ಲರಿಗೂ ಅವಕಾಶ ದೊರಕಿಸಿಕೊಡುವುದು ಹೇಗೆ? ಇದೇ ನಿಜವಾದ ಚಾಲೇಂಜ್ ಎಂದು ಪ್ರಶ್ನಾತ್ಮಕವಾಗಿ ಮುಗುಳ್ನಕ್ಕರು ನಿಲೇಕಣಿ.

'ಎಚ್ಚರ' ಎಂದು ಅನೇಕರು ಎಚ್ಚರಿಸಿದ್ದರು!
ನನ್ನ ಜೀವನದುದ್ದಕ್ಕೂ ಹಲವಾರು ಪಾಠಗಳನ್ನು ಕಲಿತಿದ್ದೇನೆ. ಸ್ಥಾಪಿತ ಮಾರ್ಗದಿಂದ ಹೊರತಾಗಿ ನಾನು ನಂಬಿದ ಮಾರ್ಗದಲ್ಲಿ ಸಾಗಿದಾಗ ಅನೇಕ ಅಡೆತಡೆ ಎದುರಿಸಿದ್ದೇನೆ, ನೀತಿಪಾಠ ಕೇಳಿದ್ದೇನೆ. ಇನ್ಫೋಸಿಸ್ ಸ್ಥಾಪಿಸಲು ನಾರಾಯಣ ಮೂರ್ತಿ ಅವರಿಂದ ಆಹ್ವಾನ ಬಂದಾಗ 'ಎಚ್ಚರ' ಎಂದು ಅನೇಕರು ಎಚ್ಚರಿಸಿದ್ದರು. ಆಧಾರ್ ಕೈಗೆತ್ತಿಕೊಂಡಾಗ ಅವ್ಯವಸ್ಥಿತ ಸರಕಾರದೊಡನೆ ಏಕೆ ಗುದ್ದಾಟ ಎಂದು ತಡೆಹಿಡಿದು ಹಲವರು ಕೇಳಿದ್ದರು. ಆದರೂ ನಾನು ನನಗೆ ಸರಿ ಎನಿಸಿದ ಮಾರ್ಗದಲ್ಲೇ ನಡೆದೆ ಎಂದ ಅವರು, ನನ್ನ ಅನೇಕ ಸಾಧನೆಗಳಲ್ಲಿ ನನ್ನ ಕೈವಾಡವಿದೆ ಎಂದು ಶ್ರೀಮತಿಯವರು ಹೇಳಿಕೊಳ್ಳುತ್ತಾರೆ ಎಂದು ರೋಹಿಣಿ ಅವರೆಡೆಗೆ ಕೈತೋರಿ ನಗೆಚಟಾಕಿ ಹಾರಿಸಿದರು.

ಬೆಂಗಳೂರಿನ ಉದ್ಧಾರಕ್ಕಾಗಿ ಐಡಿಯಾ ಬೇಕಾಗಿವೆ
ಮುಂದೆಯೂ ಕೂಡ ನನ್ನ ಮುಂದೆ ಹಲವಾರು ಸವಾಲುಗಳಿವೆ. ಎಲ್ಲರಿಗೂ ಅವಕಾಶ ದೊರಕಿಸಿ ಕೊಡುವುದರ ಜೊತೆಗೆ, ಸೂಕ್ತವಾದ ವ್ಯವಸ್ಥೆಯನ್ನು ಸೃಷ್ಟಿಸುವುದು, ಪ್ರಬಲ ಸಂಸ್ಥೆ ಸ್ಥಾಪಿಸುವುದು, ಸೂಕ್ತ ಜನರೊಂದಿಗೆ ಸಹಭಾಗಿತ್ವ ಹೊಂದುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನಿಜವಾದ ಸವಾಲು. ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಉದ್ಧಾರಕ್ಕಾಗಿ ಐಡಿಯಾಗಳು ಬೇಕಾಗಿವೆ. ಜಾಗತಿಕ ಮಟ್ಟದಲ್ಲಿ ಬೆಳಗಲು ಬೆಂಗಳೂರಿಗೆ ಎಲ್ಲ ಅವಕಾಶಗಳಿವೆ. ಉತ್ತಮ ನೀರು, ಸಂಚಾರ ಇತ್ಯಾದಿ ಮೂಲಸೌಕರ್ಯಗಳನ್ನು ನಗರಕ್ಕೆ ಕಲ್ಪಿಸುವುದು ನನ್ನ ಕನಸು ಎಂದು ಅವರು ತಮ್ಮ ಕನಸುಗಳನ್ನು ಹರವಿಕೊಂಡರು.

ಬೆಂಗಳೂರನ್ನೇನೋ ಉದ್ಧಾರ ಮಾಡುತ್ತೇನೆ ಅಂತೀರಿ
ಬೆಂಗಳೂರನ್ನೇನೋ ಉದ್ಧಾರ ಮಾಡುತ್ತೇನೆ ಅಂತೀರಿ. ಆದರೆ, ಬೆಂಗಳೂರಿನ ಜುಟ್ಟನ್ನು ಹಿಡಿದಿರುವ ಬಿಬಿಎಂಪಿ ದಿವಾಳಿ ಹಂತದಲ್ಲಿದೆ. ಹೀಗಿದ್ದಾಗ ಬೆಂಗಳೂರಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಒನ್ಇಂಡಿಯಾ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಅವರ ಬಳಿ ನಿಖರವಾದ ಉತ್ತರವಿರಲಿಲ್ಲ. ಅದನ್ನು ಇನ್ನೂ ಅಧ್ಯಯನ ಮಾಡಬೇಕಾಗಿದೆ. ಹಲವಾರು ಉದ್ಯಮಿಗಳು, ಮತ್ತಿತರ ಜನರೊಂದಿಗೆ ಚರ್ಚಿಸಬೇಕಾಗಿದೆ. ಅದಕ್ಕಾಗಿ ಬೇರೆಯದೇ ಆದ ನಿಧಿ ಎತ್ತುವುದರ ಜೊತೆಗೆ ವಿಭಿನ್ನ ರೀತಿಯಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಉತ್ತರಿಸಿದರು.

ಜೀವನದಲ್ಲಿ ಸೋಲುವುದು ಖಂಡಿತ ತಪ್ಪಲ್ಲ
ಪ್ರಶ್ನೋತ್ತರ ವೇಳೆಯಲ್ಲಿ ಅವರ ರಾಜಕೀಯ ನಿಲುವು, ಮೂವತ್ತು ವರ್ಷಗಳ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳು, ವಿಶಿಷ್ಟ ಗುರುತಿನ ಚೀಟಿ ಆಧಾರ್ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದ ಬಗೆ, ಅದು ಪ್ರಧಾನಿಯಿಂದ ಹಿಡಿದು ಕಸಗುಡಿಸುವವರವರೆಗೆ ಆಗುವ ಪ್ರಯೋಜನಗಳು, ಇಂದಿನ ಯುವಜನತೆ ಎದುರಿಸಬೇಕಾದ ಸವಾಲು ಮತ್ತು ಸೋಲುಗೆಲುವುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಸಮೀಪದೃಷ್ಟಿಯ ಗುರಿಯನ್ನು ಇಟ್ಟುಕೊಂಡು ಯಶಸ್ಸು ಸಾಧಿಸುವ ಬದಲು, ದೂರದೃಷ್ಟಿಯ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಸೋಲನುಭವಿಸುವುದು ತಪ್ಪಲ್ಲ. ಅದೇ ಸೋಲು ಮುಂದೆ ಗೆಲುವಿನ ಮೆಟ್ಟಿಲಾಗುತ್ತದೆ ಎಂದು ಅವರು ನುಡಿದರು.

ಆಧಾರ್ ಜನರಿಗೆ, ಅಧಿಕಾರಿಗಳಿಗೆ ಅರ್ಥವಾಗಿದೆಯೆ?
ಆಧಾರ್ ಚೀಟಿಯನ್ನೇನೋ ದೇಶಕ್ಕೆ ನೀಡಿದ್ದೀರಿ, ಆದರೆ ಅದು ಜನರಿಗೆ, ರಾಜಕಾರಣಿಗಳಿಗೆ ಅರ್ಥವಾಗಿದೆಯೆ? ಅದರ ಲಾಭಗಳನ್ನು ಸಾಮಾನ್ಯರಿಗೆ ತಲುಪಿಸಲು ಸರಕಾರ ವಿಫಲವಾದರೆ ಅದು ನಿಮ್ಮ ಸೋಲಾಗುವುದಿಲ್ಲವೆ ಎಂದು ಒನ್ಇಂಡಿಯಾ ಕೇಳಿದ ಮತ್ತೊಂದು ಪ್ರಶ್ನೆಗೆ ಕನ್ನಡದಲ್ಲಿ ಧಾರವಾಡ ಭಾಷೆಯಲ್ಲಿ ಉತ್ತರಿಸಿದ ಅವರು, ಪ್ರತಿಯೊಬ್ಬರಿಗೂ ಅಸ್ವಿತ್ವ ನೀಡುವ ಈ ಚೀಟಿಯಿಂದ ಬ್ಯಾಂಕ್ ಖಾತೆ ಸುಲಭವಾಗಿ ತೆರೆಯಬಹುದು, ತಮ್ಮನ್ನು ಗುರುತಿಸಿಕೊಳ್ಳಲು ಮತ್ತು ಅನಿಸಿದ್ದನ್ನು ಹೇಳಲು ಹಕ್ಕು ನೀಡುತ್ತದೆ. ಆದರೆ, ಬಳಸುವುದು ಆರಂಭಿಸದರೆ ಮಾತ್ರ ಇದರ ಲಾಭ ಸಿಗಲಿದೆ. ಇದು ಶ್ರೀಸಾಮಾನ್ಯರಿಗೆ ಅರಿವಾಗಲು ಸ್ವಲ್ಪ ಸಮಯ ಬೇಕು ಎಂದರು.

ಎಷ್ಟೋ ಚೀಟಿಗಳಿದ್ದರೂ ಆಧಾರ್ ಏಕೆ ಬೇಕು?
ಪಾಸ್ಪೋರ್ಟ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಮುಂತಾದ ಎಷ್ಟೋ ಚೀಟಿಗಳಿದ್ದರೂ ಆಧಾರ್ ಏಕೆ ಬೇಕು ಎಂದು ತೂರಿಬಂದ ಮತ್ತೊಂದು ಪ್ರಶ್ನೆಗೆ, ಈ ಗುರುತಿನ ಚೀಟಿಗಳು ಎಲ್ಲರ ಬಳಿಯೂ ಇರುವುದಿಲ್ಲ. ಆದರೆ, ಆಧಾರ್ ಎಲ್ಲರಿಗೂ ಸಿಗಲಿದೆ. ಈ ಡಿಜಿಟಲ್ ಗುರುತಿನ ಚೀಟಿಯಿದ್ದರೆ, ಯಾವುದೇ ವ್ಯವಹಾರಗಳಿಗೆ ಆನ್ ಲೈನ್ ಮುಖಾಂತರ ನಮ್ಮ ಗುರುತನ್ನು ದೃಢೀಕರಿಸುವುದು ಆಧಾರ್ ನಿಂದ ಮಾತ್ರ ಸಾಧ್ಯ ಎಂದು ಅವರು ಆಧಾರನ್ನುಸಮರ್ಥಿಸಿಕೊಂಡರು. ಆದರೂ, ಇದನ್ನು ಜನರಿಗೆ ತಿಳಿಯಪಡಿಸುವಲ್ಲಿ ನಮ್ಮ ಕಡೆಯಿಂದ ಸಮರ್ಥವಾಗಿ ಕಾರ್ಯ ನಡೆದಿಲ್ಲ ಎಂದು ಒಪ್ಪಿಕೊಂಡರು.

ಯಾರ ವಿರುದ್ಧವೂ ಸ್ಪರ್ಧಿಸಲು ಸಿದ್ಧ : ನಂದನ್
ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನೀಡಲು ನಯವಾಗಿಯೇ ಅವರು ನಿರಾಕರಿಸಿದರು. ಸ್ಪರ್ಧಿಸಿದರೆ ನಿಮ್ಮದೇ ಕಂಪನಿಯ ಹಳೆಯ ಸ್ನೇಹಿತನ ವಿರುದ್ಧ ಸ್ಪರ್ಧಿಸಲು ಸಿದ್ಧವೇ ಎಂಬ ಪ್ರಶ್ನೆಗೆ, ಈ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ಯುದ್ಧಕ್ಕೆ ಸಿದ್ಧನಿದ್ದೇನೆ ಎಂದು ನಿಲೇಕಣಿ ಅವರು ಸಾರಿದರು.

ರಾಜಕೀಯಕ್ಕೆ ಆಧಾರ್ ಬಳಸಿದರೆ ತಪ್ಪೇನು?
ಆಧಾರ್ ಚೀಟಿಗಾಗಿ ಇಷ್ಟೊಂದು ಮಾಡಿದ್ದೀರಾ, ಚುನಾವಣೆಯಲ್ಲಿ ಆ ಸಾಧನೆಯನ್ನು ಹಿಡಿದು ಕಣಕ್ಕಿಳಿಯುವಿರಾ ಎಂದು ಪತ್ರಕರ್ತರೊಬ್ಬರ ಬತ್ತಳಿಕೆಯಿಂದ ಹಾರಿಬಂದ ಪ್ರಶ್ನೆಗೆ, ಹೌದು ಆಧಾರ್ ಗಾಗಿ ನನ್ನ ಜೀವನದ ಒಂದಿಷ್ಟು ವರ್ಷಗಳನ್ನು ತ್ಯಾಗ ಮಾಡಿದ್ದೇನೆ. ಜನರಿಗೆ ಲಾಭವಾಗಲೆಂದು ಶ್ರಮಿಸಿದ್ದೇನೆ. ರಾಜಕೀಯಕ್ಕಾಗಿ ಅದನ್ನು ಬಳಸಿದರೆ ಅದರಲ್ಲಿ ತಪ್ಪೇನಿದೆ ಎಂದು ಪತ್ರಕರ್ತರಿಗೇ ಅವರು ಮರುಪ್ರಶ್ನಿಸಿದರು.












Click it and Unblock the Notifications