Breaking; ಬೆಂಗಳೂರು, ಹೃದಯಾಘಾತದಿಂದ ಹೆಡ್ ಕಾನ್ಸ್‌ಟೇಬಲ್ ನಿಧನ
ಬೆಂಗಳೂರು, ಜನವರಿ 04; ಬೆಂಗಳೂರು ನಗರದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ಪೊಲೀಸರು ಸಿಬ್ಬಂದಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಮೃತಪಟ್ಟವರನ್ನು ಹೆಬ್ಬಾಳ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಪಾಳಿಯಲ್ಲಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಬುಧವಾರ ಬೆಳಗ್ಗೆ 7 ಗಂಟೆಗೆ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುವಾಗ ತಲೆಸುತ್ತಿ ಬಿದ್ದಿದ್ದರು. ಆಗ ಪೊಲೀಸ್ ವಾಹನದಲ್ಲಿಯೇ ಕರೆದುಕೊಂಡು ಹೋಗಿ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೇ ವಿರೂಪಾಕ್ಷಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೆಬ್ಬಾಳ ಠಾಣೆಯ ಪೊಲೀಸ್ ಸಿಬ್ಬಂದಿಗಳು ವಿರೂಪಾಕ್ಷಪ್ಪ ಸಾವಿಗೆ ಕಂಬನಿ ಮಿಡಿದಿದ್ದಾರೆ. 2008ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ವಿರೂಪಾಕ್ಷಪ್ಪ ಮೂಲತಃ ವಿಜಯಪುರ ಜಿಲ್ಲೆಯವರು. ದೇವನಹಳ್ಳಿ, ಏರ್‌ಪೋರ್ಟ್ ಠಾಣೆಗಳ ಸಂಚಾರಿ ವಿಭಾಗದಲ್ಲಿಯೂ ವಿರೂಪಾಕ್ಷಪ್ಪ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಹೆಬ್ಬಾಳ ಠಾಣೆ ಹೆಡ್ ಕಾನ್ಸ್‌ಟೇಬಲ್ ಆಗಿದ್ದರು.
ವಿರೂಪಾಕ್ಷಪ್ಪ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ದೇವನಹಳ್ಳಿಯ ಸುತ್ತಮುತ್ತ ಬಡವರು, ನಿರ್ಗತಿಕರಿಗೆ ನೆರವಾಗಿದ್ದರು. ಜನರ ಪ್ರೀತಿಗಳಿಸಿದ್ದರು. ಬಡ್ತಿ ಪಡೆದು ಹೆಬ್ಬಾಳ ಠಾಣೆಗೆ ಆಗಮಿಸಿದ್ದರು.
ಪೊಲೀಸರ ಸಂತಾಪ; ಬೆಂಗಳೂರು ಪೊಲೀಸರು ವಿರೂಪಾಕ್ಷ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ನಾವು ನಮ್ಮ @BlrCityPolice ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಇಂದು ಬೆಳಗ್ಗೆ ಕರ್ತವ್ಯದ ವೇಳೆ ಹೃದಯಾಘಾತದಿಂದ ನಿಧನರಾದ ಹೆಬ್ಬಾಳ ಪೊಲೀಸ್ ಠಾಣೆಯ ಶ್ರೀ ವಿರೂಪಾಕ್ಷಪ್ಪ ಅವರ ಕುಟುಂಬಕ್ಕೆ, ಸ್ನೇಹಿತರಿಗೆ & ಸಹೋದ್ಯೋಗಿಗಳಿಗೆ ನಮ್ಮ ತೀವ್ರ ಸಂತಾಪವನ್ನು ಸೂಚಿಸುತ್ತೇವೆ.
ಅವರ ಸಮರ್ಪಿತ ಸೇವೆಗೆ ಗೌರವ & ಕೃತಜ್ಞತೆಗಳು' ಎಂದು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ.












Click it and Unblock the Notifications