ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ವೇಳೆ ಪೊಲೀಸರಿಂದ ರೌಡಿಗಳ ಪರೇಡ್

|
Google Oneindia Kannada News

ಬೆಂಗಳೂರು, ಮಾ.13 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಬೆಂಗಳೂರು ನಗರದ ರೌಡಿಗಳಿಗೆ ಪೊಲೀಸರು ಬುಧವಾರ ಬಿಸಿ ಮುಟ್ಟಿಸಿದ್ದಾರೆ. 1,283 ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚುನಾವಣೆ ವೇಳೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

ನಗರ ಜಂಟಿ ಪೊಲೀಸ್ ಆಯುಕ್ತ ಕೆವಿ ಶರತ್‌ಚಂದ್ರ ಹಾಗೂ ಎಸ್ ರವಿ ನೇತೃತ್ವದಲ್ಲಿ ಎಲ್ಲ ವಿಭಾಗದ ಡಿಸಿಪಿಗಳು ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಬೆಂಗಳೂರು ನಗರದ ಏಳು ವಿಭಾಗಗಳ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 1,283 ರೌಡಿಗಳ ನಿವಾಸಗಳ ಮೇಲೆ ಬುಧವಾರ ದಾಳಿ ನಡೆಸಿದರು.

Police

ಬುಧವಾರ ಮುಂಜಾನೆ 4 ಗಂಟೆಗೆ ಆರಂಭವಾದ ದಾಳಿ ಬೆಳಗ್ಗೆ 11 ಗಂಟೆವರೆಗೆ ನಡೆದಿದೆ. ಈ ವೇಲೆ ಎಂಟು ಕಾರು ಸೇರಿದಂತೆ 45 ವಾಹನಗಳು, ಪಿಸ್ತೂಲ್ ಹಾಗೂ ಮಚ್ಚು, ಲಾಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊತ್ತನೂರಿನಲ್ಲಿ ರೌಡಿಯೊಬ್ಬನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. [ಕರ್ನಾಟಕದ ಚುನಾವಣೆ ವೇಳಾಪಟ್ಟಿ]

ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ಬಳಿಕ ಅವರನ್ನು ಆಡುಗೋಡಿ ಹಾಗೂ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ತಹಸೀಲ್ದಾರ್ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಬಾಲ ಬಿಚ್ಚಬೇಡಿ : ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆಸುವುದು, ಅಭ್ಯರ್ಥಿಗೆ ಬೆದರಿಕೆ ಹಾಕುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು : ಡಿಸಿಪಿಗಳಾದ ಸಂದೀಪ್ ಪಾಟೀಲ್, ಲಾಬೂರಾಮ್, ಬಿಆರ್ ರವಿಕಾಂತೇಗೌಡ, ಟಿಡಿ ಪವಾರ್, ಎಚ್ ಎಸ್ ರೇವಣ್ಣ, ಸುರೇಶ್, ಹರ್ಷ ಹಾಗೂ ನಗರದ ಎಲ್ಲ ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ರೌಡಿಗಳ ಚಟುವಟಿಕೆ ಮೇಲೆ ನಿಗಾ ಇಡುವಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ.

English summary
The Bangalore City police rounded up 1,283 rowdies in a raid that began at 4 am on Wednesday, March 12. Police said, round up for precautionary measure ahead of the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X