ತೊಗಾಡಿಯಾ, ವಿಎಚ್ ಪಿ ಮೇಲೆ ಮೂರು ಕೇಸು ದಾಖಲು
ಬೆಂಗಳೂರು, ಫೆ.9: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ವಿರಾಟ್ ಹಿಂದು ಸಮಾಜೋತ್ಸವದ ಆಯೋಜಕರು ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ವಿರುದ್ಧ ಬೆಂಗಳೂರು ಪೊಲೀಸರು ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು ನಗರ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿಎಚ್‌ಪಿಯು ಅವರ ವಿಡಿಯೋ ಭಾಷಣವನ್ನು ಸಮಾಜೋತ್ಸವ ಸಂದರ್ಭದಲ್ಲಿ ಬಿತ್ತರಿಸಲು ಸಿದ್ಧತೆ ನಡೆಸಿತ್ತು. ಅದರೆ, ಇದಕ್ಕೂ ನಿರ್ಬಂಧ ಹೇರಿ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಶನಿವಾರವೇ ಆದೇಶ ಹೊರಡಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ತೊಗಾಡಿಯಾ ಅವರ ಮೇಲಿನ ನಿರ್ಬಂಧ ತೆರವಿಗೆ ಕೋರ್ಟ್ ಸಮ್ಮತಿಸಿರಲಿಲ್ಲ.

ಅದರೆ, ಹೈಕೋರ್ಟ್ ಆದೇಶ ಉಲ್ಲಂಘಿಸಿ ತೊಗಾಡಿಯಾ ಅವರ ಭಾಷಣದ ಮುದ್ರಿತ ವಿಡಿಯೋ ಪ್ರಸಾರ ಮಾಡಲಾಯಿತು. ಅಲ್ಲದೇ, ಅವಧಿಗಿಂತ ಹೆಚ್ಚು ಕಾಲ ಕಾರ್ಯಕ್ರಮ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಎಲ್ಲವನ್ನು ಪರಿಗಣಿಸಿ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 180 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. [ಸಮಾಜೋತ್ಸವದಲ್ಲಿ ತೊಗಾಡಿಯಾ ವಿಡಿಯೋ ಭಾಷಣ]
ಈ ಕುರಿತಂತೆ ಈಗಾಗಲೇ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು ಹೇಳಿದ್ದಾರೆ. [ವಿಡಿಯೋ: ಬಸವನಗುಡಿಯ ಹಿಂದೂ ಸಮಾಜೋತ್ಸವ]
ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ 50ಕ್ಕೂ ಅಧಿಕ ಸ್ವಾಮೀಜಿಗಳು, ಆರ್ಎಸ್ಎಸ್ ಮುಖಂಡ ಭಯ್ಯಾಜಿ ಸುರೇಶ್ ಜೋಷಿ, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರವಿ ಸುಬ್ರಮಣ್ಯ, ಆರ್ ಅಶೋಕ್, ವಿಶ್ವನಾಥ್, ಸತೀಶ್ ರೆಡ್ಡಿ, ರಾಮಚಂದ್ರ ಗೌಡ, ಹಾಲಿ ಮತ್ತು ಮಾಜಿ ಶಾಸಕ, ಕಾರ್ಪೋರೇಟರ್ ಗಳು, ಚಿತ್ರನಟ ಅವಿನಾಶ್, ಮಾಳವಿಕ, ದೂರದರ್ಶನದ ಹೆಚ್ಚುವರಿ ನಿರ್ದೇಶಕ ಮಹೇಶ್ ಜೋಷಿ ಮುಂತಾದವರು ಸಮಾಜೋತ್ಸವದಲ್ಲಿ ಭಾಗವಹಿಸಿದ್ದರು.












Click it and Unblock the Notifications