ಬೆಂಗಳೂರು ಡಬಲ್ ಮರ್ಡರ್: ಮೊಮ್ಮಗ, ಮತ್ತಿಬ್ಬರ ಬಂಧನ
ಬೆಂಗಳೂರು, ನವೆಂಬರ್ 29: ನಗರದ ಯಮಲೂರಿನಲ್ಲಿ ನವೆಂಬರ್ 26ರಂದು ನಡೆದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಮ್ಮಗ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದಾರೆ.
ದಂಪತಿಯ ಮೊಮ್ಮಗ ಪ್ರಮೋದ್ ಹಾಗೂ ಆತನ ಸಹಚರರಾದ ಹುಸೇನ್ ಪಾಷಾ, ಪ್ರವೀಣ್ ರನ್ನು ಎಚ್ಎಎಲ್ ಠಾಣೆ ಪೊಲೀಸರು ಬುಧವಾರ ಬಂಧಿಸಿದರು.
ಬಂಧಿಸಲು ಬಂದ ಪೊಲೀಸರ ಮೇಲೆ ಹುಸೇನ್ ಪಾಷಾ ಹಲ್ಲೆಗೆ ಯತ್ನಿಸಿದ್ದ, ಈ ವೇಳೆ ಎಚ್ಎಎಲ್ ಠಾಣೆ ಪಿಎಸ್ಐ ಪ್ರಶೀಲಾ ಗುಂಡು ಹಾರಿಸಿ ಆತನನ್ನು ಸೆರೆ ಹಿಡಿದರು. ಪೊಲೀಸರ ಗುಂಡು ಪಾಷಾ ಕಾಲಿಗೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೆಂಬರ್ 26ರ ಕೊಲೆ
ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ನಿವೃತ್ತ ನೌಕರರಾದ ಗೋವಿಂದನ್ (65) ಮತ್ತು ಸರೋಜಮ್ಮ (62) ರನ್ನು ಅವರ ಅಶ್ವಥ್ ನಗರ ನಿವಾಸದಲ್ಲಿ ಕೈ-ಕಾಲು ಕಟ್ಟಿ ಹತ್ಯೆ ಮಾಡಲಾಗಿತ್ತು.
ಮಂಗಳವಾರ ರಾತ್ರಿವರೆಗೂ ಈ ವಿಚಾರ ಬಹಿರಂಗವಾಗಿರಲಿಲ್ಲ. ಆದರೆ ಮಂಗಳವಾರ ರಾತ್ರಿ ಮನೆಯಿಂದ ವಾಸನೆ ಬರುತ್ತಿತ್ತು. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. 8.30ರ ಸುಮಾರಿಗೆ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಹತ್ಯೆಯಾಗಿರುವುದು ತಿಳಿದು ಬಂದಿದೆ.
ಆಸ್ತಿಗಾಗಿ ಜೋಡಿ ಕೊಲೆ
ಸರೋಜಾ ತಂದೆಗೆ ವೈಟ್ ಫೀಲ್ಡ್ ಮತ್ತು ವರ್ತೂರಿನಲ್ಲಿ 50 ಎಕರೆ ಜಮೀನಿತ್ತು. ಆದರೆ ಅವರ ನಿಧನಾನಂತರ ಕುಟುಂಬದಲ್ಲಿ ಆಸ್ತಿ ಕಲಹ ಆರಂಭವಾಗಿತ್ತು.
ಸರೋಜಮ್ಮ ಮತ್ತು ಅವರ ಸಹೋದರ ಆಸ್ತಿಗಾಗಿ ಕಚ್ಚಾಟ ಆರಂಭಿಸಿದ್ದರು.
ಈ ಜಗಳ ಜಾರಿಯಲ್ಲಿರುವ ಹೊತ್ತಲ್ಲೇ ಇನ್ನೇನು ಕೊಲೆಗೂ ಸ್ವಲ್ಪ ಮುಂಚೆ ದಂಪತಿ ತಮಿಳುನಾಡಿಗೆ ವಾಪಸಾಗಲು ಯೋಜನೆ ಹಾಕಿಕೊಂಡಿದ್ದರು. ಆದರೆ ವಿಧಿಯಾಟ ಅವರನ್ನು ಯಮಲೋಕಕ್ಕೆ ಕರೆದುಕೊಂಡಿದೆ.
ನವೆಂಬರ್ 26ರಂದು 3 ಗಂಟೆ ಸುಮಾರಿಗೆ ಪ್ರಮೋದ್, ಪ್ರವೀಣ್ ಹಾಗೂ ಹುಸೇನ್ ಪಾಷಾ ಸೇರಿಕೊಂಡು ದಂಪತಿಯನ್ನು ಕೈಕಾಲು ಕಟ್ಟಿ ಕೊಲೆ ಮಾಡಿದ್ದರು. ನಂತರ ನೇಣು ಬಿಗಿದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್ ಹೇಳಿದ್ದಾರೆ.












Click it and Unblock the Notifications