ಬೆಂಗಳೂರಿಗೆ ನ.11ಕ್ಕೆ ಪ್ರಧಾನಿ ಮೋದಿ ಆಗಮನ: ಸಿದ್ಧತೆಗಳ ಬಗ್ಗೆ ಮೋದಿ ಜೊತೆ ಸಿಎಂ ಚರ್ಚೆ
ಬೆಂಗಳೂರು, ಅಕ್ಟೋಬರ್ 27: ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಸಾರ್ವಜನಿಕರಿಗೆ, ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರು.
ಪ್ರಧಾನಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಮಾರಂಭಗಳ ಸಿದ್ಧತೆ ಬಗ್ಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿಮಂತ್ರಿಗಳು ಅಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ಪಡೆದರು. ನಂತರ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಬೆಂಗಳೂರಿನ ನಿಗದಿತ ಪ್ರದೇಶಗಳಲ್ಲಿ ಭಾರಿ ಪೊಲೀಸ್ ಬಿಗಿ ಭದ್ರತೆ ಇರಲಿದೆ. ಅಂದು ಚೆನ್ನೈನಿಂದ ಮೈಸೂರು ನಡುವಿನ ದಕ್ಷಿಣ ಭಾರತದ ಮೊದಲ ಹಾಗೂ ಭಾರತದ ಐದನೇ 'ವಂದೇ ಭಾರತ್ ಎಕ್ಸ್‌ಪ್ರೆಸ್ ವೇ ಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10ಕ್ಕೆ ಎಚ್‌ಎಎಲ್‌ಗೆ ಪ್ರಧಾನಿ ಆಗಮನ
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ಮೋದಿಯವರು ನವೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಅನ್ನು ಉದ್ಘಾಟಿಸಲಿದ್ದಾರೆ.
5000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿದೆ. ನೂತನ ವಿನ್ಯಾಸದಲ್ಲಿ ಆಧುನಿಕವಾಗಿ ನಿರ್ಮಾಣವಾದ ಟರ್ಮಿನಲ್ ಮುಂದೆ ಉತ್ತಮ ಸುವ್ಯವಸ್ಥಿತ ಉದ್ಯಾನ, ರಾಮಾಯಣ-ಮಹಾಭಾರತದ ಕಾಲದ ಸಸ್ಯಗಳನ್ನು ಗುರುತಿಸಿ ನೆಡಲಾಗಿದೆ. ನೀರಿನ ಮರುಬಳಕೆ, ವಿದ್ಯುತ್ ಬಳಕೆಯಲ್ಲಿ ಸುಸ್ಥಿರತೆಯನ್ನು ಹೊಂದಿರುವ ಟರ್ಮಿನಲ್ ಇದಾಗಿದೆ ಎಂದರು.

ಅಂದು ಕೆಂಪೇಗೌಡರ ಪ್ರತಿಮೆ ಅನಾವರಣ
ನವೆಂಬರ್ 11ರಂದು ವಿಮಾನ ನಿಲ್ದಾಣದ ಆವರಣದಲ್ಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ 'ಪ್ರಗತಿ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಲಿದ್ದಾರೆ. ನಂತರ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿಗಳು ಪಾಲ್ಗೊಂಡು ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನಕ್ಕೆ ಗಣ್ಯರ ಆಹ್ವಾನ
ಅಚ್ಚುಮೆಚ್ಚಿನ ನಟ ದಿ. ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ನಡೆಯಲಿದೆ. ಈ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಆಗಮಿಸುವ ಕುರಿಉತ ಈಗಾಗಲೇ 3- 4 ಗಣ್ಯರ ಜೊತೆಗೆ ಈಗಾಗಲೇ ಚರ್ಚಿಸಲಾಗಿದೆ. ಆ ಗಣ್ಯರು ತಮ್ಮ ಆಗಮನ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಖಾತ್ರಿಪಡಿಸಲಿದ್ದಾರೆ ಎಂದು ತಿಳಿಸಿದರು.
ಬಂಡೆಮಠದ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ನಂತರ ಎಲ್ಲ ಸತ್ಯಗಳೂ ಹೊರಬೀಳಲಿದೆ ಎಂದು ಹೇಳಿದರು.

ಪ್ರಗತಿ ಪ್ರತಿಮೆ: ಮೃತ್ತಿಕೆ ಸಂಗ್ರಹ ಅಭಿಯಾನ
ವಿಮಾನ ನಿಲ್ದಾಣದಲ್ಲಿನ 108 ಅಡಿ ಎತ್ತರದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ಉದ್ಘಾಟನೆ ಹಿನ್ನೆಲೆ ರಾಜ್ಯಾದ್ಯಂತ ಮಣ್ಣು ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ನವೆಂಬರ್ 7ರ ವರೆಗೆ ಮಣ್ಣು ಸಂಗ್ರಹಿಸಿ ನಂತರ ತಾಲೂಕು ಮಟ್ಟದಿಂದ ಜಿಲ್ಲಾ ಕೇಂದ್ರಕ್ಕೆ, ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಮಣ್ಣು ತರಲಾಗುತ್ತಿದೆ. ಈಗಾಗಲೇ ರಾಮನಗರ, ಬೆಂಗಳೂರು, ಕೋಲಾರ ಸೇರದಿಂತೆ ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಅಭಿಯಾನದಲ್ಲಿ ರಥಗಳು (ವಾಹನ) ಮಣ್ಣು ಸಂಗ್ರಹಿಸುತ್ತಿವೆ.
ಪ್ರಧಾನಮಂತ್ರಿ ಜೊತೆಗಿನ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ರೈಲ್ವೆ ಮಂಡಳಿಯ ಅಧಿಕಾರಿಗಳು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications