ನರೇಂದ್ರ ಮೋದಿ ರೋಡ್ ಶೋ ಎಫೆಕ್ಟ್: ಕಲ್ಯಾಣ ಮಂಟಪಕ್ಕೆ ಬಾರದ ಮದುಮಗ, ಬೈಕ್‌ನಲ್ಲಿ ತೆರಳಿದ ಮದುಮಗಳು
ಶನಿವಾರ, ಏಪ್ರಿಲ್ 29ರಂದು ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ರೋಡ್ ಶೋ ಸಾಗುವ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಈ ವೇಳೆ ನೂತನ ವಿವಾಹ ಬದುಕಿಗೆ ಕಾಲಿಡಬೇಕಿದ್ದ ಮದುಮಗ ಮತ್ತು ಮದುಮಗಳು ಪರದಾಡಬೇಕಾದ ಪರಿಸ್ಥಿತಿ ಉಂಟಾಯಿತು. ಬೆಳಗ್ಗೆ ಮಾಗಡಿ ರಸ್ತೆಯಲ್ಲಿನ ಮದುಮಗನನ್ನು ಕಲ್ಯಾಣ ಮಂಟಪಕ್ಕೆ ಹೋಗಲು ಬಿಡದ ಪೊಲೀಸರು ಅಡ್ಡಗಟ್ಟಿದ್ದರು.

ನಂತರ ಮಧ್ಯಾಹ್ನ ಸುಂಕದಕಟ್ಟೆಯ ಬಳಿ ಮತ್ತೊಂದು ಪ್ರಕರಣದಲ್ಲಿ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುಮಗಳನ್ನು ಪೊಲೀಸರು ಅಡ್ಡಗಟ್ಟಿದ ಘಟನೆ ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ಸುಮಾರು 5.3 ಕಿಮೀ ರೋಡ್ ಶೋ ನಡೆಸಿದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳ ಬಂದ್ ಮಾಡಿದ್ದರಿಂದ ನಿತ್ಯ ಓಡಾಡುವ ಜನರಿಗೆ ಕಿರಿಕಿರಿ ಉಂಟಾಯಿತು. ಛತ್ರಕ್ಕೆ ತೆರಳಲು ಮದುಮಗ ಹಾಗೂ ಮದುಮಗಳು ಪರದಾಡಿದರು. ಕಾರಿನಲ್ಲಿ ತೆರಳಲು ಪೊಲೀಸರು ಅನುಮತಿ ನೀಡದ ಕಾರಣ ಕೊನೆಗೆ ಮದುಮಗಳು ಬೈಕ್‌ನಲ್ಲಿ ಕಲ್ಯಾಣ ಮಂಟಪಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು.
ಸುಮನಹಳ್ಳಿ ಜಂಕ್ಷನ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ನಾವು ಬರುವ ವೇಳೆಗೆ ಟ್ರಾಫಿಕ್ ಜಾಮ್ ಆಗಿತ್ತು. ಮದುಮಗ ಕೂಡ ಇನ್ನೂ ಮದುವೆ ಮಂಟಪಕ್ಕೆ ಬಂದಿಲ್ಲ. ಜನರು ಮದುವೆಗೆ ಬರಲು ಕೂಡ ಆಗುತ್ತಿಲ್ಲ. ಒಬ್ಬರಿಗಾಗಿ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರುವ ಬಗ್ಗೆ ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ದೂರಿದರು.
ನಾವು ಒಂದು ತಿಂಗಳ ಮುಂಚೆಯೇ ಮದುವೆ ದಿನಾಂಕ ನಿಗದಿ ಮಾಡಿ, ಕಲ್ಯಾಣ ಮಂಟಪ ಬುಕ್ ಮಾಡಿದ್ದೇವು. ಈಗ ಏಕಾಏಕಿ ರೋಡ್ ಶೋ ಘೋಷಣೆ ಮಾಡಿದ್ದಾರೆ. ಪೊಲೀಸರು ಕಲ್ಯಾಣ ಮಂಟಪದ ಎದುರು ಕೂಡ ಬ್ಯಾರಿಕೇಡ್ ಹಾಕಿದ್ದಾರೆ. ಮದುವೆ ಊಟದ ತಯಾರಿಗೆ ಬೇಕಿದ್ದ ಹಲವು ವಸ್ತುಗಳನ್ನು ತೆಗೆದುಕೊಂಡು ಬರಲು ಆಗುತ್ತಿಲ್ಲ. ಬಹಳ ದೂರದಿಂದ ಈಗ ವಸ್ತುಗಳನ್ನು ಹೊತ್ತುಕೊಂಡು ತರುವ ಸ್ಥಿತಿ ನಿರ್ಮಾಣವಾಗಿದೆ. ಬಹಳ ಬೇಸರ ಆಗಿದೆ ಎಂದಿದ್ದಾರೆ.
ಕಲ್ಯಾಣ ಮಂಟಪಕ್ಕೆ ಹೋಗಲು ಮದುಮಗಳನ್ನು ಬೈಕ್‌ನಲ್ಲಿ ಕರೆತಂದ ಕುಟುಂಬಸ್ಥರು, ರಸ್ತೆಯ ಪಕ್ಕದಲ್ಲಿರುವ ಮುದ್ದಣ್ಣ ಛತ್ರದಲ್ಲಿ ಮದುವೆ ನಿಗದಿಯಾಗಿದ್ದು, ಹೋಗಲು ಬಿಡುವಂತೆ ಮನವಿ ಮಾಡಿದರು.
ಬೈಕ್‌ನಲ್ಲಿ ಹೋಗುತ್ತಿದ್ದ ಮದುಮಗಳು, ಚಾಲಕ ಹಾಗೂ ಕಲಶ ಹಿಡಿದು ಕುಳಿತಿದ್ದ ಮಹಿಳೆಯನ್ನು ನೋಡಿದ ಪೊಲೀಸರು ಕಲಶವನ್ನು ಸ್ಕ್ಯಾನ್ ಮಾಡಿ ಪರಿಶೀಲನೆ ನಡೆಸಿದರು. ಮದುಮಗಳನ್ನು ಅಡಡಗಟ್ಟಿದ ಪೊಲೀಸರ ನಡುವೆ ನಡೆಯುತ್ತಿದ್ದ ವಾಗ್ವಾದ ಸೆರೆಹಿಡಿಯಲು ಮಾಧ್ಯಮಗಳ ಕ್ಯಾಮೆರಾಗಳು ಮುಂದಾಗುತ್ತಿದ್ದಂತೆ, ಪೊಲೀಸರು ಮದುಮಗಳು ಕಲ್ಯಾಣ ಮಂಟಪದತ್ತ ತೆರಳಲು ಅವಕಾಶ ಮಾಡಿಕೊಟ್ಟರು.












Click it and Unblock the Notifications