Tejasvi Surya: ತೇಜಸ್ವಿ ಸೂರ್ಯ ಮಾಡಿದ ಕೆಲಸಕ್ಕೆ ಭೇಷ್ ಎಂದ ಪ್ರಧಾನಿ ಮೋದಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಾದರಿ ಕೆಲಸ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಕ್ಕಳಿಗಾಗಿ ಬೆಂಗಳೂರು ದಕ್ಷಿಣ ಬೇಸಿಗೆ ಶಿಬಿರ ಆಯೋಜಿಸಿದ್ದಾರೆ. ಕ್ಷೇತ್ರದ 10 ವಿವಿಧ ಕೇಂದ್ರಗಳಲ್ಲಿ ಬೇಸಿಗೆ ಶಿಬಿರ ಆಯೋಜಿಸಿದ್ದು, ಇದನ್ನು ಪ್ರಧಾನಿ ಮೋದಿ ಮೆಚ್ಚಿದ್ದಾರೆ.
ಈ ಬಗ್ಗೆ ತೇಜಸ್ವಿ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಬೇಸಿಗೆ ಶಿಬಿರದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಬೇಸಿಗೆ ಶಿಬಿರವು ಭರದಿಂದ ಸಾಗುತ್ತಿದೆ. ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸ್ವರಕ್ಷಣೆ ತಂತ್ರಗಳನ್ನು ಕಲಿಯುವುದು, ಯೋಗ, ಗೀತೆ ಪಠಣ, ಕಲೆ ಮತ್ತು ನೃತ್ಯದ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಮಕ್ಕಳು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರತಿ ಕ್ಷಣವನ್ನು ಆನಂದಿಸುವುದನ್ನು ನೋಡಲು ಸಂತೋಷವಾಗಿದೆ. ನಮ್ಮ ಕೇಂದ್ರಗಳಲ್ಲಿ ಮಕ್ಕಳು ಈ ಶಿಬಿರ ಆನಂದಿಸುತ್ತಿದ್ದಾರೆ. ಚಿಣ್ಣರು ಈ ಬೇಸಿಗೆ ಶಿಬಿರ-2025ರಲ್ಲಿ ಕ್ರಿಯಾಶೀಲ ಕಲಿಕೆಯೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳ ಉತ್ಸಾಹದೊಂದಿಗೆ ಪೋಷಕರು ಹಾಗೂ ಸ್ವಯಂಸೇವಕರು ಕೂಡ ಶಿಬಿರದ ಯಶಸ್ಸಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.
ಬೆಂಗಳೂರು ದಕ್ಷಿಣದ 10 ವಿವಿಧ ಕೇಂದ್ರಗಳಲ್ಲಿ ಬೇಸಿಗೆ ಶಿಬಿರ-2025ಕ್ಕೆ ಚಾಲನೆ ನೀಡಲಾಗಿದ್ದು, ಯೋಗ, ಧ್ಯಾನ, ಭಗವದ್ಗೀತೆ ಪಠಣ, ಶ್ಲೋಕ, ನೃತ್ಯ, ಕರಾಟೆ, ಚಿತ್ರಕಲೆ ಸೇರಿದಂತೆ ಇತರ ಕಲಿಕಾ ಚಟುವಟಿಕೆಗಳಲ್ಲಿ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ ಎಂದಿದ್ದಾರೆ. ಮೋದಿ ಅವರು ಮನ್‌ಕಿ ಬಾತ್‌ನಲ್ಲಿ ತಿಳಿಸಿರುವಂತೆ ಈ ಬೇಸಿಗೆಯಲ್ಲಿ ಹೊಸ ಚೇತೋಹಾರಿ ಚಟುವಟಿಕೆಗಳೊಂದಿಗೆ, ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದು, ಅದಕ್ಕೆ ತಕ್ಕಂತೆ ಬೆಂಗಳೂರು ದಕ್ಷಿಣದಲ್ಲಿ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಮೋದಿ ಮೆಚ್ಚುಗೆ
ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ನನ್ನ ಎಲ್ಲ ಯುವ ಸ್ನೇಹಿತರಿಗೆ ಅದ್ಭುತ ಅನುಭವ ಮತ್ತು ಸಂತೋಷದ ರಜೆ ದಿನಗಳನ್ನು ಹಾರೈಸುತ್ತೇನೆ. ಕಳೆದ ಭಾನುವಾರದ ಮನ್‌ಕೀ ಬಾತ್‌ನಲ್ಲಿ ನಾನು ಹೇಳಿದಂತೆ ಬೇಸಿಗೆ ರಜಾದಿನಗಳು ಆನಂದಿಸಲು, ಕಲಿಯಲು ಮತ್ತು ಬೆಳೆಯಲು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ಪ್ರಯತ್ನ ನಿಜಕ್ಕೂ ಅದ್ಭುತ ಎಂದು ಶ್ಲಾಘಿಸಿದ್ದಾರೆ.
ನಿಮ್ಮ ನವೀನ ಆಲೋಚನೆಗಳೊಂದಿಗೆ ದೇಶಾದ್ಯಂತ ವಿಶಿಷ್ಟ ಉಪಕ್ರಮಗಳನ್ನು ಯಾವಾಗಲೂ ಪ್ರೇರೇಪಿಸುತ್ತಿರುವುದಕ್ಕಾಗಿ ನರೇಂದ್ರ ಮೋದಿ ಜೀ ಅವರಿಗೆ ಧನ್ಯವಾದಗಳು. ಬೆಂಗಳೂರು ದಕ್ಷಿಣ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಕಲಿಯಲು ಸಾಧ್ಯವಾಗದ ಪ್ರಮುಖ ಜೀವನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಅವರ ಸಮಗ್ರ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications