ಟೆಲಿಫೋನ್ ಕದ್ದಾಲಿಕೆ ಪ್ರಕರಣ: ಸಂಕಷ್ಟದಲ್ಲಿ ಕುಮಾರಸ್ವಾಮಿ
Recommended Video
ಬೆಂಗಳೂರು, ಆಗಸ್ಟ್ 16: ಟೆಲಿಫೋನ್ ಕದ್ದಾಲಿಕೆ ಪ್ರಕರಣ ದಿನೇ-ದಿನೇ ಕುಮಾರಸ್ವಾಮಿ ಅವರ ಕೊರಳಿಗೆ ಉರುಳಾಗುತ್ತಿದೆ. ದೋಸ್ತಿಗಳಾಗಿದ್ದ ಕಾಂಗ್ರೆಸ್ ನಾಯಕರೂ ಕೂಡ ಫೋನ್ ಕದ್ದಾಲಿಕೆ ತನಿಖೆ ಆಗಬೇಕು ಎಂದಿರುವುದು ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟು ಮಾಡಿದೆ.
ಕುಮಾರಸ್ವಾಮಿ ಅವರು ಅನರ್ಹ ಶಾಸಕರು, ಕಾಂಗ್ರೆಸ್ ಹಿರಿಯ ನಾಯಕರುಗಳು ಸೇರಿ ಹಲವಾರು ಮಂದಿಯ ಫೋನ್ ಟ್ಯಾಪ್ ಮಾಡಿಸಿ ಸಂಭಾಷಣೆ ಕದ್ದಾಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ಬಿಜೆಪಿ ನಾಯಕರು ಆರೋಪ ಕೇಳಿಬಂದಾಗಲೇ ಒತ್ತಾಯ ಮಾಡಿದ್ದರು. ಈಗ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕರ ಬೆಂಬಲವೂ ಸಿಕ್ಕಿದೆ.
ನಿನ್ನೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, 'ಫೋನ್ ಕದ್ದಾಲಿಕೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕದ್ದಾಲಿಕೆ ಆರೋಪದ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಿಸಲಿ. ಯಾರೇ ಭಾಗಿಯಾಗಿದ್ದರೂ ಶಿಕ್ಷೆ ಆಗಲಿ' ಎಂದಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಫೋನ್ ಕದ್ದಾಲಿಕೆ ಗಂಭೀರ ಅಪರಾಧವಾಗಿದ್ದು, ಇದರ ಸೂಕ್ತ ತನಿಖೆ ಆಗಬೇಕು ಎಂದಿದ್ದಾರೆ. ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರು ತಮ್ಮದೇ ಫೋನ್ ಕದ್ದಾಲಿಕೆ ಮಾಡಿರುವುದು ಕಾಂಗ್ರೆಸ್ ನ ಮುಖಂಡರಿಗೆ ತೀವ್ರ ಬೇಸರ ತರಿಸಿದೆ.
ಬಿಜೆಪಿಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಚಿಂತಿಸಿದ್ದು, ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸ್ ಬಂದು ಸಂಪುಟ ರಚನೆ ಆದ ಬಳಿಕ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡುವ ಸಾಧ್ಯತೆ ಇದೆ.
ಈ ಪ್ರಕರಣದ ಬಳಸಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬವನ್ನು ಬಗ್ಗು ಬಡಿಯಲು ಯಡಿಯೂರಪ್ಪ ಅವರು ಸಹ ಆಸಕ್ತಿ ತೋರಿದ್ದಾರೆ. ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಜೊತೆಗೆ ಕೆಲವು ಐಪಿಎಸ್ ಅಧಿಕಾರಗಳ ತಲೆದಂಡವೂ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications