KEA: ಪಿಜಿ ವೈದ್ಯಕೀಯ ಪ್ರವೇಶ: SC ಅಭ್ಯರ್ಥಿಗಳ ಒಳ ಮೀಸಲಾತಿ ದಾಖಲೆ ಸಲ್ಲಿಕೆ ಕಡ್ಡಾಯ
ಬೆಂಗಳೂರು, ನವೆಂಬರ್ 25: ಪ್ರಸಕ್ತ ಸಾಲಿನ 2025ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸೂಚನೆ ನೀಡಿದೆ. ದಾಖಲೆ ಪರಿಶೀಲನೆ ವೇಳೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ (SCA, SCB, SCC) ದಾಖಲೆ ಸಲ್ಲಿಸಿಲ್ಲ. ಈ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಹೇಳಿದರು.
ಪಿಜಿ ವೈದ್ಯಕೀಯ ಪ್ರವೇಶದ ಅಭ್ಯರ್ಥಿಗಳು ಇದೇ ನವೆಂಬರ್ 25 ಮತ್ತು 26 ರಂದು ಖುದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಬಂದು ಒಳಮೀಸಲಾತಿಗೆ ಸಂಬಂಧಿಸಿದ ನಿಗದಿತ ದಾಖಲೆ ಸಲ್ಲಿಸಬಹುದು ಎಂದಿದ್ದಾರೆ.

ದಾಖಲೆ ಪರಿಶೀಲನೆ ವೇಳೆಗೆ ಅನೇಕರು ತಹಶೀಲ್ದಾರ್ ಅವರಿಂದ ಒಳ ಮೀಸಲಾತಿ ಕುರಿತ ಪ್ರಮಾಣ ಪತ್ರಗಳನ್ನು ಪಡೆಯಲು ಆಗಿರಲಿಲ್ಲ ಎಂದು ಅನೇಕ ಅಭ್ಯರ್ಥಿಗಳು ಮನವಿ ಸಲ್ಲಿಸಿದ ಕಾರಣಕ್ಕೆ ಈ ಅನುಕೂಲ ಮಾಡಲಾಗಿದೆ. ಯಾರೆಲ್ಲ ದಾಖಲೆಗಳನ್ನು ಪರಿಶೀಲನಾ ಅರ್ಜಿ ಜತೆ ಸಲ್ಲಿಸುತ್ತಾರೊ ಅಂತಹವರನ್ನು ಸದರಿ ಪ್ರವರ್ಗದಡಿ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/karrec23 ಗೆ ಭೇಟಿ ನೀಡಬಹುದೆಂದು ತಿಳಿಸಿದರು.
ರಾಜ್ಯ ಸರ್ಕಾರದ ಆದೇಶದಲ್ಲಿ (25-08-2025) ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಒಳ ಮೀಸಲಾತಿಯನ್ನು ಪ್ರವರ್ಗ-ಎ / ಪ್ರವರ್ಗ-ಬಿ /ಪ್ರವರ್ಗ-ಸಿ ಎಂದು ವರ್ಗೀಕರಣ ಮಾಡಿರುವುದು ಅಭ್ಯರ್ಥಿಗಳಿಗೆ ತಿಳಿದಿರುತ್ತದೆ. ಮೇಲಿನ ಆದೇಶದ ಅನ್ವಯ ಕರ್ನಾಟಕದ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪಿಜಿ ವೈದ್ಯಕೀಯ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಒಳಮೀಸಲಾತಿಯ ವಿವರಗಳನ್ನೊಳಗೊಂಡ ಜಾತಿ ಪ್ರಮಾಣ ಪತ್ರಗಳು ದೊರಕಿರಲಿಲ್ಲ. ಈ ಕಾರಣದಿಂದ ಅಭ್ಯರ್ಥಿಗಳ ಮನವಿ ಮೇರೆಗೆ ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿಯ ಅಡಿಯಲ್ಲಿ ವಿಂಗಡಿಸಿರುವ ಯಾವ ಪ್ರವರ್ಗದ ಸಮುದಾಯಕ್ಕೆ ಸೇರಿರುತ್ತೀರೆಂದು (SCA / SCB / SCC) ಅಭ್ಯರ್ಥಿಗಳಿಂದ ವಿವರ ಪಡೆದು ತಾತ್ಕಾಲಿಕವಾಗಿ ಮೊದಲನೇ ಹಾಗೂ ಎರಡನೇ ಅಣುಕು ಸೀಟು ಹಂಚಿಕೆಯಲ್ಲಿ ಪರಿಗಣಿಸಲಾಗಿರುತ್ತದೆ.
ಸದ್ಯ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್ ಡಿ ಸಂಖ್ಯೆ ಮುದ್ರಿತವಾಗಿರುವ ಒಳ ಮೀಸಲಾತಿ ವಿವರ ಒಳಗೊಂಡಿರುವ ಜಾತಿ ಪ್ರಮಾಣ ಪತ್ರವನ್ನು (SCA / SCB / SCC) ಆಯಾ ತಹಶೀಲ್ದಾರ್ ರವರಿಂದ ಪಡೆಡಬೇಕು. ಅದನ್ನು ನವೆಂಬರ್ 25 ಅಥವಾ 26ರಂದು ಕಚೇರಿಗೆ ಬಂದು ಸಲ್ಲಿಸಬೇಕು.
ಅರ್ಜಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ನಮೂದಿಸಿರುವ ಎಲ್ಲಾ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್ ರವರಿಂದ ಪಡೆದ ಮೂಲ ಜಾತಿ (SCA / SCB / SCC) ಪ್ರಮಾಣ ಪತ್ರ ಗಳನ್ನು ನವೆಂಬರ್ ಸಂಜೆ 5.30 ರೊಳಗೆ ಸಲ್ಲಿಸದಿದ್ದಲ್ಲಿ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ತಿಳಿಸಿದ್ದ ಪ್ರವರ್ಗವನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗುವುದು. ಸೀಟು ಹಂಚಿಕೆಯಾದ ಮೇಲೆ ಮೂಲ ಜಾತಿ ಪ್ರಮಾಣ ಪತ್ರ ಹಾಜರುಪಡಿಸಿದಲ್ಲಿ ಮಾತ್ರ ಪ್ರವೇಶ ಪತ್ರ ನೀಡಲಾಗುವುದು. ಈ ಹಂತದಲ್ಲಿ ಯಾವುದೇ ಪ್ರವರ್ಗ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಪ್ರಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications