Jagadish Shettar: ‘ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ...’
ಬೆಂಗಳೂರು: ಕಾಂಗ್ರೆಸ್-ಬಿಜೆಪಿ ನಡುವೆ ವಾರ್ ಮುಂದುವರಿದಿದ್ದು, ಇದೀಗ ಮತ್ತೊಮ್ಮೆ ಬಿಜೆಪಿ ನಾಯಕರಿಗೆ 'ಪೇಶ್ವೆ' ವಿಚಾರ ಹಿಡಿದು ತಿರುಗೇಟು ನೀಡಿದೆ ಕಾಂಗ್ರೆಸ್. 'ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ.' ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಂದು ಹಂತದ ಚುನಾವಣಾ ಕದನಕ್ಕೆ ರಣಕಹಳೆ ಮೊಳಗಿಸಿಬಿಟ್ಟಿದೆ ಕಾಂಗ್ರೆಸ್.
ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ.
— Karnataka Congress (@INCKarnataka) April 16, 2023
ಈ ಪೇಶ್ವೆ DNA ಹೊಂದಿದವರು ಬಸವಣ್ಣನ DNA ಹೊಂದಿದವರನ್ನು ಹೊರದಬ್ಬುತ್ತಿದ್ದಾರೆ.
ಬಿಜೆಪಿ ಈಗ ತನ್ನ ಮನುವಾದದ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ.!
ಬೆಳಗ್ಗೆ ಕೂಡ ಇಂತಹದ್ದೇ ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, ಜಗದೀಶ್ ಶೆಟ್ಟರ್ ರಾಜೀನಾಮೆ ಹಿನ್ನೆಲೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿತ್ತು. 'ಮೊ-ಶಾ ಜೋಡಿ ಹಾಗೂ ಜೋ-ಸ ಜೋಡಿ ಕೇವಲ @BSYBJP ಅವರನ್ನು ಮಾತ್ರ ಮುಗಿಸಿದೆ ಎಂದುಕೊಂಡಿದ್ದರೆ ಅದು ತಪ್ಪು. ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ. BSY, ಸವದಿ, ಶೆಟ್ಟರ್ ಸೇರಿದಂತೆ ನಾಯಕತ್ವ ಹೊಂದಿದವರೆಲ್ಲರನ್ನೂ ಬಿಜೆಪಿ ಎತ್ತಿ ಬಿಸಾಡಿದೆ.' ಎಂದು ಟ್ವೀಟ್ ಮಾಡಲಾಗಿತ್ತು. ಈಗ ಮತ್ತೊಂದು ಬಾಂಬ್ ಸಿಡಿಸಿ, ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆ...'
ಇಂದು ಬೆಳಗ್ಗೆ ಟ್ವೀಟ್ ವಾರ್ ಬಳಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಆಂತರಿಕ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದೆ ಕರ್ನಾಟಕ ಕಾಂಗ್ರೆಸ್, 'ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ. ಈ ಪೇಶ್ವೆ DNA ಹೊಂದಿದವರು ಬಸವಣ್ಣನ DNA ಹೊಂದಿದವರನ್ನು ಹೊರದಬ್ಬುತ್ತಿದ್ದಾರೆ. ಬಿಜೆಪಿ ಈಗ ತನ್ನ ಮನುವಾದದ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ.!' ಎಂದು ಟ್ವೀಟ್ ಮಾಡಲಾಗಿದೆ. ಕಾಂಗ್ರೆಸ್‌ನ ಈ ಟ್ವೀಟ್ ಬಗ್ಗೆ ಬಿಸಿಬಿಸಿ ಚರ್ಚೆ ಕೂಡ ಬಲು ಜೋರಾಗಿದೆ.
ಕಾಂಗ್ರೆಸ್ ಸೇರಲು ಶೆಟ್ಟರ್ ಸಿದ್ಧತೆ?
ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದೀಗ ಮತ್ತೊಬ್ಬ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಕೂಡ ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಗಿದೆ, ಸಂಜೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತರ ಕರ್ನಾಕಟದಲ್ಲಿ ಬಿಜೆಪಿಗೆ ಇದು ದೊಡ್ಡ ಹೊಡೆತ ನೀಡಲಿದೆ ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.
ಹಿಂದೂ ಲಿಂಗಾಯತ ಅಸ್ತ್ರ ಪ್ರಯೋಗ!
ಈ ಹಿಂದೆ ಕೂಡ ಕಾಂಗ್ರೆಸ್ ನಾಯಕರು ಹಲವು ಬಾರಿ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದಾರೆ. ಈಗಲೂ ಅದೇ ಅಸ್ತ್ರದ ಮೂಲಕ ಬಿಜೆಪಿ ಹೈಕಮಾಂಡ್ ಮತ್ತು ಬಿಜೆಪಿ ರಾಜ್ಯ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಅಸ್ತ್ರ ಸಿಗುತ್ತಿದೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ವಿಚಾರ ಮುಂದಿಟ್ಟುಕೊಂಡು, ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇದನ್ನು ಟ್ವೀಟ್ ಮೂಲಕ ಸ್ಯಾಂಪಲ್ ಆಗಿ ತೋರಿಸಿದಂತಿದೆ ಕಾಂಗ್ರೆಸ್.

ಈವರೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಏನನ್ನೂ ತಿಳಿಸಿಲ್ಲ. ಆದರೆ ಕಾಂಗ್ರೆಸ್ ಸೇರುವ ಮಾತುಗಳು ಮಾತ್ರ ಕರ್ನಾಟಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೇನು ಕೆಲ ಗಂಟೆಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆ ಇದ್ದು, ಶೆಟ್ಟರ್ ನಿರ್ಧಾರಕ್ಕಾಗಿ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ನಾಯಕರೂ ಕಾದು ಕುಳಿತಿದ್ದಾರೆ. ಇನ್ನೊಂದು ಕಡೆ ಶೆಟ್ಟರ್ ಸ್ಪರ್ಧಿಸುತ್ತಿರುವ ಕ್ಷೇತ್ರಕ್ಕೆ ಈವರೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ, ಈ ಮೂಲಕ 'ಕೈ' ಪಡೆ ರಣತಂತ್ರ ಹೂಡಿದಂತೆ ಕಾಣುತ್ತಿದೆ.












Click it and Unblock the Notifications