Peenya flyover: ಭಾರೀ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಪೀಣ್ಯ ಮೇಲ್ಸೇತುವೆ, ಇಲ್ಲೊಂದು ಟ್ವಿಸ್ಟ್!
ಬೆಂಗಳೂರು, ಏಪ್ರಿಲ್.03: ಶೀಘ್ರದಲ್ಲೇ ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಆದರೆ ರಾತ್ರಿ ವೇಳೆಯಲ್ಲಿ ಅಲ್ಲ ಎಂದು ಮೂಲಗಳು ತಿಳಿಸಿವೆ. ಜನವರಿ 16 ರಿಂದ 19ರ ವರೆಗೂ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ತಜ್ಞರು ನಡೆಸಿದ್ದ ಭಾರ ಪರೀಕ್ಷೆಯಲ್ಲಿ ಮೇಲ್ಸೇತುವೆ ಸದೃಢವಾಗಿದೆ ಎಂಬುದು ಸಾಬೀತಾಗಿದೆ.
ಆದರೆ, ನಡೆಯುತ್ತಿರುವ ಸಿಮೆಂಟ್ ಗ್ರೌಟಿಂಗ್ ಕೆಲಸಗಳ ಸಮಯದಲ್ಲಿ ವಾಹನಗಳ ಚಲನೆಯಿಂದ ವೈಬ್ರೇಷನ್ಸ್ ಉಂಟಾಗುವ ಕಾರಣ ರಾತ್ರಿಯ ಸಮಯದಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ ಮುಂದುವರೆಸುವುದು ಅಗತ್ಯವಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಚಂದ್ರ ಕಿಶನ್ ಜೆ ಎಂ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪ್ರೊ.ಚಂದ್ರ ಕಿಶನ್ ಅವರು ಫ್ಲೈಓವರ್‌ನ ಸ್ಥಿತಿಯನ್ನು ಅಧ್ಯಯನ ಮಾಡಿದ ನಾಲ್ಕು ಸದಸ್ಯರ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ವಾಹನಗಳು ಫ್ಲೈಓವರ್ ಮೇಲೆ ಸಂಚಾರ ಮಾಡದಂತೆ ಸಮಿತಿ ಸೂಚಿಸಿದೆ. ಆದರೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
"ಫ್ಲೈಓವರ್ ಅನ್ನು ಪ್ರಸ್ತುತ ರಾತ್ರಿ ಸಂಚಾರಕ್ಕೆ ಮುಚ್ಚಲಾಗಿದೆ. ಇದೇ ವ್ಯವಸ್ಥೆ ಮುಂದುವರೆಯಬೇಕು ಎಂದು ನಾವು ಬಯಸುತ್ತೇವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟ್ರಾಫಿಕ್ ಪೊಲೀಸರೊಂದಿಗೆ ಈ ಬಗ್ಗೆ ಯೋಚಿಸುತ್ತಿದ್ದು, ರಾತ್ರಿ ಸಮಯಕ್ಕೆ ಕಡಿವಾಣ ಹಾಕುತ್ತಿದೆ" ಎಂದಿದ್ದಾರೆ.
ತುಮಕೂರು ರಸ್ತೆಯಲ್ಲಿ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಫ್ಲೈಓವರ್ ಅನ್ನು ಡಿಸೆಂಬರ್ 2021 ರಿಂದ ಬಸ್‌ಗಳು ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳ ಸಂಚಾರಕ್ಕೆ ನಿರ್ಭಂಧಿಸಲಾಗಿದೆ. ಈ ಫ್ಲೈಓವರ್‌ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದಿದ್ದು, ರಿಪೇರಿ ಮಾಡಬೇಕಾಗಿ ಬಂದಿತ್ತು.

ಫ್ಲೈಓವರ್ ನಿರ್ಬಂಧದಿಂದ ಕೆಳಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ದಿನ ನಿತ್ಯದ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಎನ್‌ಎಚ್‌ಎಐ ಕಳೆದ ವರ್ಷ 38.5 ಕೋಟಿ ರೂಪಾಯಿಯಲ್ಲಿ ರಿಪೇರಿ ಕಾರ್ಯವನ್ನು ಪ್ರಾರಂಭಿಸಿತು. ಪ್ರತಿ ಸ್ಪ್ಯಾನ್‌ನಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿ ಸ್ಲಾಟ್‌ಗಳಲ್ಲಿ ಸೇರಿಸಲು ಮತ್ತು ಮೇಲ್ಸೇತುವೆಯನ್ನು ಬಲಪಡಿಸಲು ಒತ್ತು ನೀಡಿದೆ. ಈವರೆಗೆ ಫ್ಲೈಓವರ್‌ನಲ್ಲಿ 120 ಸ್ಪ್ಯಾನ್‌ಗಳೊಂದಿಗೆ, ಎನ್‌ಎಚ್‌ಎಐ 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಸೇರಿಸಿದೆ.
ಜನವರಿಯಲ್ಲಿ, 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳಲ್ಲಿ ಲೋಡ್ ಪರೀಕ್ಷೆಗಳನ್ನು ನಡೆಸಲು ಎನ್‌ಎಚ್‌ಎಐ 60 ಗಂಟೆಗಳ ಕಾಲ ಫ್ಲೈಓವರ್ ಮುಚ್ಚಿತು. ಸಮಿತಿಯ ಲೋಡ್ ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿದೆ ಎಂದು ಪ್ರೊಪೇಸರ್ ಚಂದ್ರ ಕಿಶನ್ ಹೇಳಿದ್ದಾರೆ. ಮಾರ್ಚ್‌ನಲ್ಲಿ, ಎನ್‌ಎಚ್‌ಎಐ 1,243 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಬದಲಾಯಿಸಲು ಪ್ರಾರಂಭಿಸಿತ್ತು. ಇದರಿಂದ ಭವಿಷ್ಯದಲ್ಲಿ ಯಾವುದೇ ತುಕ್ಕು ಅವುಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಫ್ಲೈಓವರ್‌ನಲ್ಲಿ ಸಿಮೆಂಟ್ ಗ್ರೌಟಿಂಗ್ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕೆ ಐದರಿಂದ ಆರು ಗಂಟೆಗಳ ಸಮಯ ಬೇಕಾಗುತ್ತದೆ. ಎಲ್ಲಾ 1,243 ಕೇಬಲ್‌ಗಳನ್ನು ಬದಲಾಯಿಸಲು ಒಂಬತ್ತು ತಿಂಗಳಿಂದ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿಯೇ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕರೂ ರಾತ್ರಿ ಸಂಚಾರಕ್ಕೆ ಅನುಮತಿ ಸಿಗುವುದಿಲ್ಲ. ಅದಕ್ಕಾಗಿ ಇನ್ನು ಕೆಲ ಸಮಯ ಕಾಯಬೇಕಿದೆ.












Click it and Unblock the Notifications