Peenya Flyover: ಇಂದಿನಿಂದ ಜನವರಿ 19ರವರೆಗೆ ಪೀಣ್ಯ ಫ್ಲೈಓವರ್ ಬಂದ್, ಯಾಕೆ ಹಾಗೂ ಪರ್ಯಾಯ ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಜನವರಿ 16: ಇಂದಿನಿಂದ ಅಂದರೆ ಜನವರಿ 16ರ ರಾತ್ರಿ 11 ಗಂಟೆಯಿಂದ 19ರ ಬೆಳಗ್ಗೆ 11 ಗಂಟೆವರೆಗೂ ಈ ಫ್ಲೈ ಓವರ್ ಬಂದ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಆಗಿರುವ ಪೀಣ್ಯ ಫ್ಲೈಓವರ್ ಇಂದು ರಾತ್ರಿಯಿಂದಲೇ ನಾಲ್ಕು ದಿನಗಳ ಕಾಲ ಬಂದ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಹೆದ್ದಾರಿಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ರಸ್ತೆ ಟೆಸ್ಟಿಂಗ್ ನಡೆಸಲಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಪರ್ಯಾಯ ಮಾರ್ಗಗಳು ಹಾಗೂ ಸರ್ವೀಸ್ ರಸ್ತೆ ಬಳಕೆ ಮಾಡುವಂತೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗಗಳ ಮಾಹಿತಿ ಹೀಗಿದೆ
* ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್ಹೆಚ್-4 ಮತ್ತು ಸರ್ವೀಸ್ ರಸ್ತೆಯ ಮೂಲಕ 8ನೇ ಮೈಲಿ-ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯಕ್ಕೆ ಹೋಗಬಹುದಾಗಿದೆ.
* ಸಿಎಂಟಿಐ ಜಂಕ್ಷನ್ನಿಂದ ನೆಲಮಂಗಲ ಕಡೆಗೆ ಫ್ಲೈ ಓವರ್ ರಸ್ತೆಯಲ್ಲಿ ಹೋಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಹೆಚ್-4 ಮತ್ತು ಸರ್ವೀಸ್ ರಸ್ತೆಯಲ್ಲಿ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚಾರ ಮಾಡಲು ಸೂಚಿಸಲಾಗಿದೆ.
ಯಾಕೆ ನಿರ್ಬಂಧ?: ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಲೋ ಮೀಟರ್ ಉದ್ದವಿರು ಪೀಣ್ಯ ಮೇಲ್ಸೇತುವೆಯ ವಯಾಡಕ್ಟ್ನ ಸಮಗ್ರತೆ ಹಾಗೂ ಲೋಡ್ ಟೆಸ್ಟಿಂಗ್ ಪರಿಶೀಲನೆ ಸಂಚಾರಕ್ಕೆ ನಿರ್ಬಂಧ ಹೇರಲು ಮುಖ್ಯ ಕಾರಣ ಆಗಿದೆ.
ಅದರಲ್ಲೂ ನಗರಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ವಾಹನಗಳು ಪೀಣ್ಯ ಫ್ಲೈಓವರ್ ಮೇಲೆಯೇ ಬರಬೇಕಾಗುತ್ತದೆ. ಆದ್ದರಿಂದ ಇದು ಹಲವು ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯಾಗಿದೆ. ಇದು ಬಂದ್ ಆದರೆ ವಾಹನ ಸವಾರರಿಗಂತೂ ಚಿತ್ರಹಿಂಸೆಯಾಗುತ್ತದೆ. ಆದ್ದರಿಂದಲೇ ಪೊಲೀಸರು ಯಾವುದೇ ತೊಂದರೆ ಆಗಬಾರದೆಂದು ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications