ಪಾದಚಾರಿಗಳೇ ಎಚ್ಚರ: ಬೆಂಗಳೂರಿನಲ್ಲಿ ಮೂರು ವರ್ಷಗಳಲ್ಲಿ 77% ಹೆಚ್ಚಾಗಿದೆ ಪಾದಚಾರಿಗಳ ಸಾವು!
ಬೆಂಗಳೂರು, ಏಪ್ರಿಲ್.07: 2021 ಮತ್ತು 2023 ರ ನಡುವೆ ಬೆಂಗಳೂರಿನಲ್ಲಿ ಪಾದಚಾರಿಗಳ ಸಾವುಗಳು 77% ರಷ್ಟು ಹೆಚ್ಚಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೋಲೀಸ್ ವಿಭಾಗದ ಅಂಕಿಅಂಶಗಳು ಮಾಹಿತಿ ನೀಡಿದೆ. ಇದು ಪಾದಚಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಾಹನಗಳ ಹೆಚ್ಚಳ, ಇಕ್ಕಟ್ಟಾದ ರಸ್ತೆಗಳು, ಸಂಚಾರ ನಿಯಮಗಳ ಉಲ್ಲಂಘನೆಯನ್ನು ಈ ವರದಿ ನಮ್ಮ ಕಣ್ಣಮುಂದೆ ಇಟ್ಟಿದೆ.
ಬೆಂಗಳೂರು ಟ್ರಾಫಿಕ್ ಪೋಲೀಸ್ (BTP) ಯ ಅಂಕಿಅಂಶಗಳ ಪ್ರಕಾರ, 2021 ರಲ್ಲಿ 161 ಪಾದಚಾರಿ ಸಾವುಗಳು ವರದಿಯಾಗಿವೆ, ಇದು 2023 ರ ವೇಳೆಗೆ 286 ಕ್ಕೆ ಏರಿಕೆಯಾಗಿದೆ. 2023 ರಲ್ಲಿ ನಗರದಲ್ಲಿ ಸಂಭವಿಸಿದ ಅಪಘಾತಗಳಿಂದ ಸುಮಾರು 40% ರಷ್ಟು ಪಾದಚಾರಿ ಸಾವುಗಳು ಸಂಭವಿಸಿವೆ. 2022 ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದ ಅಂಕಿಅಂಶಗಳು ನಾಗರಿಕ ಸಂಸ್ಥೆಯ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ಹೇಳಿದೆ.

ರಸ್ತೆ ದಾಟುವಾಗ ಪಾದಚಾರಿಗಳ ಸಾವು ಹೆಚ್ಚಾಗಿ ಸಂಭವಿಸುತ್ತಿದೆ. ಇದಕ್ಕೆ ಜನನಿಬಿಡ ರಸ್ತೆಗಳನ್ನು ನಿರ್ಲಕ್ಷದಿಂದ ದಾಟುವುದೇ ಕಾರಣ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸ್ಕೈವಾಕ್‌ಗಳು ಮತ್ತು ಪಾದಚಾರಿ ಸುರಂಗಮಾರ್ಗಗಳಂತಹ ಸಾರ್ವಜನಿಕ ಮೂಲಸೌಕರ್ಯಗಳ ಕೊರತೆಯಿಂದ ಪಾದಚಾರಿಗಳು ರಸ್ತೆಗಳನ್ನು ದಾಟಲು ಹೋಗಿ ಆಕ್ಸಿಡೆಂಟ್‌ಗೆ ಒಳಗಾಗಿ ಮೃತಪಡುತ್ತಿದ್ದಾರೆ.
"ಜನರು ಪಾದಚಾರಿ ಕ್ರಾಸಿಂಗ್ ಅನ್ನು ಬಳಸದೆ ಅಡ್ಡಾದಿಡ್ಡಿಯಾಗಿ ರಸ್ತೆಗಳನ್ನು ದಾಟಲು ಪ್ರಯತ್ನಿಸುವುದು ದೊಡ್ಡ ಸಮಸ್ಯೆಯಾಗಿದೆ" ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ ಎನ್ ಅನುಚೇತ್ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದರು. "ಕಳೆದ ಆರು ತಿಂಗಳಿನಿಂದ, ನಾವು ಟ್ರಾಫಿಕ್ ಎಂಜಿನಿಯರಿಂಗ್ ಸೆಲ್‌ನೊಂದಿಗೆ ಕೆಲಸ ಮಾಡಿದ್ದೇವೆ. ಪಾದಚಾರಿಗಳು ಪಾದಚಾರಿ ಮಾರ್ಗಗಳಲ್ಲಿ ಮಾತ್ರ ರಸ್ತೆಗಳನ್ನು ದಾಟುವಂತೆ ಮಾಡಲು ಜನನಿಬಿಡ ರಸ್ತೆಗಳಲ್ಲಿ ಎತ್ತರದ ಮೀಡಿಯನ್‌ಗಳನ್ನು ಬಿಬಿಎಂಪಿ ಅಳವಡಿಸಿದೆ. ಇವು ಒಳ್ಳೆ ಫಲಿತಾಂಶ ನೀಡಿವೆ" ಎಂದಿದ್ದಾರೆ.
ನಗರದ ಹಲವು ಜಂಕ್ಷನ್‌ಗಳಲ್ಲಿ ಪಾದಚಾರಿ ಮಾರ್ಗದ ಕೊರತೆಯೂ ಇದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ನಗರದ ರಸ್ತೆಗಳನ್ನು ಪಾದಚಾರಿ ಸ್ನೇಹಿಯಾಗಿಸಲು ಕ್ರಮಕೈಗೊಳ್ಳುತ್ತಿದ್ದಾರೆ. ನಾವು ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ, ಫುಟ್‌ಪಾತ್ ರಿಪೇರಿ ಮಾಡಲು ವಾರ್ಡ್ ಮಟ್ಟದಲ್ಲಿ 25 ಲಕ್ಷ ರೂ.ಗಳಷ್ಟು ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications