ಮೋದಿ ಬೆಂಗಳೂರು ಸಮಾವೇಶಕ್ಕೆ 10 ರೂ. ಶುಲ್ಕ

ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯನಾಯಕರ ಸಭೆ ನಡೆಯಿತು. ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, 10 ರೂ. ಶುಲ್ಕ ನೀಡಿ ಟಿಕೆಟ್ ಖರೀದಿಸಿದವರು ಮಾತ್ರ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
ಅ.30 ಮತ್ತು 31ರಂದು ಬಿಜೆಪಿ ಕಾರ್ಯಕರ್ತರು ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ರಾಜ್ಯಾದ್ಯಂತ ಟಿಕೆಟ್ ಮಾರಟ ಮಾಡಲಿದ್ದಾರೆ. ಎರಡು ದಿನ ಟಿಕೆಟ್ ಖರೀದಿಸಿದವರು ಮಾತ್ರ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಜೋಶಿ ಮಾಹಿತಿ ನೀಡಿದರು.
ಮೋದಿ ಸಮಾವೇಶಕ್ಕೆ ಶುಲ್ಕ ನಿಗದಿಪಡಿಸಬೇಕೆ, ಬೇಡವೇ ಎಂಬ ಕುರಿತು ರಾಜ್ಯ ನಾಯಕರಲ್ಲಿ ಗೊಂದಲ ಮೂಡಿತ್ತು. ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ ರಾಜ್ಯ ನಾಯಕರು, ಪಾಲ್ಗೊಳ್ಳುವವರಿಂದ ಶುಲ್ಕ ಸಂಗ್ರಹಿಸಲು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
ದೇಶದಲ್ಲಿ ಮೋದಿ ಪರವಾದ ಅಲೆ ಇರುವುದರಿಂದ ಲಕ್ಷಾಂತರ ಜನರು ಶುಲ್ಕ ನೀಡಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಆಗಮಿಸುತ್ತಾರೆ. ಸಂಗ್ರಹಗೊಂಡ ಹಣವನ್ನು ಪಕ್ಷದ ಸಂಘಟನೆಗೆ ಬಳಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳಲಿದ್ದಾರೆ. ಸಮಾವೇಶ ನಡೆಯುವ ಸ್ಥಳ ಅಂತಿಮಗೊಂಡಿಲ್ಲ. ಸಮಾವೇಶಕ್ಕೆ ತಯಾರಿಗಾಗಿ ಜಿಲ್ಲಾ ಮಟ್ಟದಲ್ಲಿ ನ.7ರಿಂದ 10ರವರೆಗೆ ಚಿಕ್ಕ ಸಮಾವೇಶಗಳನ್ನು ನಡೆಸಲಾಗುವುದು ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಅ.28 ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಹ್ಲಾದ್ ಜೋಶಿ ಹೇಳಿದರು.












Click it and Unblock the Notifications