ಸೈನ್ಯ ಬಲಿಷ್ಠವಾಗಬೇಕಿದ್ದರೆ ಹೆಚ್ಚು ತೆರಿಗೆ ಕಟ್ಟಬೇಕು : ಎನ್ಆರ್‌ಎನ್
ಬೆಂಗಳೂರು, ಮಾರ್ಚ್ 07 : ನಮ್ಮ ಸೈನಿಕರಿಗೆ ಉತ್ತಮ ಅಸ್ತ್ರ, ಹೆಚ್ಚಿ ಸಂಬಳ, ಪೌಷ್ಟಿಕಾಂಶವುಳ್ಳ ಆಹಾರ ಸಿಗಬೇಕಿದ್ದರೆ ಮತ್ತು ಅವರು ತಮ್ಮ ಕುಟುಂಬದ ಉತ್ತಮ ಆರೈಕೆ ಮಾಡಬೇಕಿದ್ದರೆ ನಾವು ನಾಗರಿಕರು ಹೆಚ್ಚಿನ ತೆರಿಗೆ ಕಟ್ಟಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ನಾರಾಯಣ ಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮಾತನ್ನು ನಾನು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆದ ನಂತರ ಹೇಳುತ್ತಿಲ್ಲ, ಇದನ್ನು ನಾನು 2014ರಲ್ಲಿಯೂ ಹೇಳಿದ್ದೆ. ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗಬೇಕಿದ್ದರೆ ದೇಶದ ಉದ್ಯಮ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಅವರು ಉಪದೇಶ ನೀಡಿದರು.
ಭಾರತಕ್ಕೆ ನೀಡಲಾಗಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ಹಿಂತೆಗೆದುಕೊಂಡಿರುವುದರಿಂದ ಭಾರತ ಕಂಗೆಡಬಾರದು. ಈ ಪರಿಸ್ಥಿತಿಯ ಲಾಭ ಪಡೆದು ನಾವು ಪುಟೇದೇಳಬೇಕು, ಕಷ್ಟಪಟ್ಟು ದುಡಿದು ನಾವು ಇನ್ನಷ್ಟು ಬಲಿಷ್ಠರಾಗಬೇಕು ಎಂದು ನಾರಾಯಣ ಮೂರ್ತಿಯವರು ಸಲಹೆ ನೀಡಿದ್ದಾರೆ.

ಭಾರತ ಇನ್ನಷ್ಟು ಕಷ್ಟಪಟ್ಟು ಮತ್ತು ಸ್ಮಾರ್ಟ್ ಆಗಿ ಕೆಲಸ ಮಾಡಬೇಕು. ನಾವು ಹೆಚ್ಚು ಶಿಸ್ತುಬದ್ಧರಾಗಿರಬೇಕು ಮತ್ತು ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ನಾವು ಇನ್ನಷ್ಟು ಉತ್ತಮ ಸ್ಥಿತಿ ತಲುಪಲು ತುಡಿಯುತ್ತಿರಬೇಕೆ ವಿನಃ ಇತರರನ್ನು ದೂಷಿಸುತ್ತ ಕೂಡಬಾರದು ಎಂದು ನಾರಾಯಣ ಮೂರ್ತಿ ಅವರು ನುಡಿದರು.
ಆದ್ಯತೆಯ ವಹಿವಾಟಿನ ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದ ವಿತ್ತೀಯ ಕೊರತೆ ನೀಗಿಸಲು ಡೊನಾಲ್ಡ್ ಟ್ರಂಪ್ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.












Click it and Unblock the Notifications