ಬೆಂಗಳೂರು : ಜನವರಿ 1ರಿಂದ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿ
ಬೆಂಗಳೂರು, ಡಿಸೆಂಬರ್ 15 : 'ಬೆಂಗಳೂರು ನಗರದಲ್ಲಿ ಜನವರಿ 1ರಿಂದ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ' ಎಂದು ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ. ಪ್ರಾಯೋಗಿಕವಾಗಿ 56 ರಸ್ತೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.
ಅಕ್ಟೋಬರ್‌ನಿಂದಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆಗಳನ್ನು ಆರಂಭಿಸಿತ್ತು. ಮೊದಲ ಹಂತದಲ್ಲಿ ನಗರದ ಹೃದಯ ಭಾಗದಲ್ಲಿನ 85 ರಸ್ತೆಗಳ ಪೈಕಿ 56 ರಸ್ತೆಗಳನ್ನು ಪೇ ಅಂಡ್ ಪಾರ್ಕ್‌ಗಾಗಿ ಗುರುತಿಸಲಾಗಿತ್ತು. [ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?]

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ ಅವರು, '2016ರ ಜನವರಿ 1 ರಿಂದಲೇ ಪೇ ಅಂಡ್ ಪಾರ್ಕ್ ನಿಯಮ ಜಾರಿಗೆ ಬರಲಿದೆ. ಪಾರ್ಕಿಂಗ್ ಮಾಫಿಯಾ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ. [ಟಾಟಾ ಝಿಕಾದೊಂದಿಗೆ ಠಾಕು ಠೀಕಿನ ಪಯಣ ಮಾಡಿ]
ಬಿಬಿಎಂಪಿಯು 56 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ನಿಯಮ ಜಾರಿಗೆ ಬರಲಿದ್ದು, ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆಯಲಾಗಿದೆ. ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಎಂದು ವಿಂಗಡನೆ ಮಾಡಲಾಗಿದೆ. ಎಲ್ಲಾ ರಸ್ತೆಗಳಿಗೂ ಪ್ರತ್ಯೇಕ ಶುಲ್ಕ ಜಾರಿ ಮಾಡಲಿದ್ದು, ಸುಮಾರು 80 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಯಾವ-ಯಾವ ರಸ್ತೆಗಳು : ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಪೇ ಅಂಡ್ ಪಾರ್ಕ್ ನೀತಿಯನ್ನು ರೂಪಿಸಿತ್ತು. ಹಿಂದೆಯೇ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, ಜನವರಿಯಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ಎ ಪ್ಯಾಕೇಜ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು 1 ಗಂಟೆ ನಿಲ್ಲಿಸಲು 15 ರೂ., ಕಾರನ್ನು ಒಂದು ಗಂಟೆ ನಿಲ್ಲಿಸಲು 30 ರೂ. ಪಾವತಿ ಮಾಡಬೇಕು.
'ಎ' ಶ್ರೇಣಿಯ ರಸ್ತೆಗಳ ವ್ಯಾಪ್ತಿಗೆ ಅವೆನ್ಯೂ ರಸ್ತೆ, ಎಸ್.ಸಿ.ರಸ್ತೆ, ರೇಸ್ ಕೋರ್ಸ್ ಲೂಪ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಕಮರ್ಷಿಯಲ್ ಸ್ಟೀಟ್, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರಬಾ ರಸ್ತೆ, ಲಾಲ್ ಬಾಗ್ ರಸ್ತೆ, ಎನ್.ಆರ್.ರಸ್ತೆ ಸೇರಲಿವೆ.
'ಬಿ' ಶ್ರೇಣಿಯ ರಸ್ತೆಗಳು : 'ಬಿ' ಶ್ರೇಣಿಯ ರಸ್ತೆಗಳಲ್ಲಿ 1 ಗಂಟೆ ಕಾರು ನಿಲ್ಲಿಸಲು 20, ಬೈಕ್ ನಿಲ್ಲಿಸಲು 10 ರೂ. ಶುಲ್ಕ ಪಾವತಿಸಬೇಕು. ಧನ್ವಂತ್ರಿ ರಸ್ತೆ, ನೃಪತುಂಗಾ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕಾಳಿದಾಸ ಮಾರ್ಗ, ಲಿಂಕ್ ರಸ್ತೆ ಮುಂತಾದವು 'ಬಿ' ಶ್ರೇಣಿಯ ರಸ್ತೆಗಳಾಗಿವೆ.
'ಸಿ' ಶ್ರೇಣಿ ರಸ್ತೆ : 'ಸಿ' ಶ್ರೇಣಿಯ ರಸ್ತೆಗಳಲ್ಲಿ 1 ಗಂಟೆ ಕಾರು ನಿಲ್ಲಿಸಲು 15 ರೂ., ಬೈಕ್ ನಿಲ್ಲಿಸಲು 5 ರೂ. ಪಾವತಿ ಮಾಡಬೇಕು. ಪಂಪ ಮಹಾಕವಿ ರಸ್ತೆ, ಬನಪ್ಪ ಪಾರ್ಕ್, ಸುಲ್ತಾನ್ ಪೇಟೆ ರಸ್ತೆ, ಶಿವಾಜಿ ರಸ್ತೆ, ಲ್ಯಾವೆಲ್ಲೆ ರಸ್ತೆ, ಬಳೆ ಪೇಟೆ ರಸ್ತೆ ಮುಂತಾದವು 'ಸಿ' ಶ್ರೇಣಿಗೆ ಸೇರುತ್ತವೆ.












Click it and Unblock the Notifications