ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್ ಹರಿದು ವ್ಯಕ್ತಿ ಸಾವು
ಬೆಂಗಳೂರು, ಡಿಸೆಂಬರ್ 7: ಬಿಎಂಟಿಸಿ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಿಎಂಟಿಸಿ ಬಸ್ ಹತ್ತಲು ಹೋಗಿ ಚಕ್ರಗಳು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇದಾಗಿದೆ. ಕಲಬುರಗಿ ಮೂಲದ ರವೀಂದ್ರ ಮೃತರು.
ಕೆಲವು ವರ್ಷಗಳ ಕಾಲ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ ರವೀಂದ್ರ, ವಾಪಸ್ ತಮ್ಮ ಊರಿಗೆ ಹೋಗಿದ್ದರು. ಕೆಲ ತಿಂಗಳ ಬಳಿಕ ಮತ್ತೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಹೆಬ್ಬಾಳದಲ್ಲಿರುವ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದರು. ಸಂದರ್ಶನಕ್ಕೆಂದು ಹೋಗಿ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು .

ರಾತ್ರಿ ಸುಮಾರು 8.30 ರ ಸುಮಾರಿಗೆ ಮನೆಗೆ ಹೋಗಲು ಮತ್ತೊಂದು ಬಸ್ ಹಿಡಿಯಲು ಹೋಗಿದ್ದು, ಬಸ್ ಚಲಿಸುತ್ತಿದ್ದ ಕಾರಣ ಜಾರಿ ಕೆಳಗೆ ಬಿದ್ದಿದ್ದು, ಈ ವೇಳೆ ಬಸ್‌ನ ಹಿಂಬದಿ ಚಕ್ರ ಮೈಮೇಲೆ ಹತ್ತಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತುರಾತುರದಲ್ಲಿ ಬಸ್ ಏರಲು ಬಂದು ಮೃತಪಟ್ಟಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಬಸ್‌ಗಳು ರಷ್ ಇರುವಾಗ ಅಥವಾ ಚಲಿಸುತ್ತಿರುವಾಗ ಯಾವುದೇ ಕಾರಣಕ್ಕೂ ಬಸ್ ಹತ್ತಬಾರದು, ಒಂದು ವೇಳೆ ಒಂದೈದು ನಿಮಿಷ ತಡವಾಗಬಹುದು ಆದರೆ ನಿಮ್ಮ ಪ್ರಾಣ ಉಳಿಯುತ್ತದೆ.











Click it and Unblock the Notifications