ಸಂಪುಟಕ್ಕೆ ಪರಮೇಶ್ವರ್, ಸೋಮವಾರ ತೀರ್ಮಾನ?
ಬೆಂಗಳೂರು,, ನ. 18 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮೊದಲ ಪರೀಕ್ಷೆ ಎದುರಾಗಿದೆ. ಸೋಮವಾರ ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ.
ದೀರ್ಘ ಕಾಲದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಪರಮೇಶ್ವರ್ ಸಂಪುಟ ಸೇರ್ಪಡೆ, ನಿಗಮ-ಮಂಡಳಿಗಳ ನೇಮಕ ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಭಾನುವಾರ ದೆಹಲಿಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ 10.30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಉಭಯ ನಾಯಕರು ಒಟ್ಟಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ನಡೆಯುವ ಸಾಧ್ಯತೆ ಇದೆ.
ಮುಮ್ತಾಜ್ ಅಲಿಖಾನ್ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಸದಸ್ಯರ ನೇಮಕ, ಲೋಕಸಭೆ ಚುನಾವಣೆ ಸಿದ್ಧತೆ, ಸಚಿವ ಸಂಪುಟ ವಿಸ್ತರಣೆ, ಸಂತೋಷ್ ಲಾಡ್ ವಿಚಾರಗಳ ಕುರಿತು ಸೋನಿಯಾ ಗಾಂಧಿ ಜೊತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ನಿಗಮ-ಮಂಡಳಿ ನೇಮಕಾತಿಯ ನಡೆದಿಲ್ಲ ಈ ಕುರಿತು ಚರ್ಚೆ ನಡೆಯಲಿದೆ.
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಾ,ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ, ಸಂತೋಷ್ ಲಾಡ್ ಕುರಿತು ಸೋನಿಯಾ ಗಾಂಧಿ ಉಭಯ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಅವರಿಗೆ ಲಾಡ್ ಅವರ ಕುರಿತ ದಾಖಲೆಗಳನ್ನು ನೀಡಿ, ನಾಯಕರು ಸಮರ್ಥಿಸಿಕೊಳ್ಳುವ ಸಾಧ್ಯತೆ ಇದೆ. (ಲಾಡ್ ಲಡಾಯಿ : ದೊರಸ್ವಾಮಿಯಿಂದ ಸಿಎಂಗೆ ಪತ್ರ)
ಸಮನ್ವಯ ಸಮಿತಿ ಸಭೆ : ರಾಜ್ಯದಲ್ಲಿ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸೋಮವಾರ ದೆಹಲಿಯಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಸಮಿತಿ ಸದಸ್ಯರಾದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್, ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. (ಸಿದ್ದು ಓಟಕ್ಕೆ ಬ್ರೇಕ್ ಸಮನ್ವಯ ಸಮಿತಿ)












Click it and Unblock the Notifications