4,000 ರೂಪಾಯಿ ಕೊಟ್ಟರೆ ಸಿಗುತ್ತೆ ಶುದ್ಧ ಗಾಳಿ, ನಮ್ಮ ಬೆಂಗಳೂರಲ್ಲೂ ಹಿಂಗಾಯ್ತು ನೋಡಿ... Oxygen Therapy
ದುಡ್ಡು.. ದುಡ್ಡು.. ಪ್ರಪಂಚದಲ್ಲಿ ದುಡ್ಡು ಇಲ್ಲದೆ ಏನೂ ನಡೆಯಲ್ಲ, ಕೊನೆಗೆ ದುಡ್ಡು ಇಲ್ಲದಿದ್ರೆ ಒಳ್ಳೇ ಗಾಳಿ ಕೂಡ ಸಿಗಲ್ಲ ಎಂಬ ಸ್ಥಿತಿ ನಿರ್ಮಾಣ ಆಗುತ್ತಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಾ ಇದ್ದು, ವಾತಾವರಣ ಮಾಲಿನ್ಯ ಆತಂಕ ಮೂಡಿಸುತ್ತಿದೆ. ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅತ್ಯಂತ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದ ಜನರಿಗೆ ಇದೀಗ ವಾಯು ಮಾಲಿನ್ಯದ ಪರಿಣಾಮ ದೊಡ್ಡ ದೊಡ್ಡ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲೇ 4,000 ರೂಪಾಯಿ ಕೊಟ್ಟರೆ ಬೆಂಗಳೂರಲ್ಲಿ ಸಿಗುತ್ತೆ ಶುದ್ಧ ಗಾಳಿ!
ಬೆಂಗಳೂರು ನಿವಾಸಿಗಳಿಗೆ ಉಸಿರಾಟದ ಸಮಸ್ಯೆ, ಕೆಮ್ಮು & ನೆಗಡಿಯು ಸೇರಿ ಶ್ವಾಸಕೋಶ ಸಂಬಂಧಿ ತೊಂದರೆಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ, ಬೆಂಗಳೂರಿನ ವಾತಾವರಣ ಕೆಡಿಸುತ್ತಿರುವ ವಾಯು ಮಾಲಿನ್ಯ. ಹೀಗಾಗಿ ಬೆಂಗಳೂರಿಗರಲ್ಲಿ ಇದೀಗ ಶೇಕಡಾ 100 ರಷ್ಟು ಆಮ್ಲಜನಕ ಪಡೆಯಲು ನಿವಾಸಿಗಳು ಪರದಾಡುತ್ತಿದ್ದಾರೆ. ಒಳ್ಳೆಯ ಗಾಳಿಗಾಗಿ ಕೈಯಿಂದ ಹಣ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಈಗಿನ ಅಪಾಯದಿಂದ ಬಚಾವ್ ಆಗಲು ಜನರು ಕೂಡ ದುಡ್ಡು ಕೊಟ್ಟು ಒಳ್ಳೆಯ ಗಾಳಿ ಪಡೆಯಲು ಮುಂದಾಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಒಳ್ಳೆಯ ಗಾಳಿಗೂ ದುಡ್ಡು!
ಮನುಷ್ಯರು ಆಮ್ಲಜನಕವನ್ನು ವಾತಾವರಣದಿಂದ ನೇರವಾಗಿ ಎಳೆದುಕೊಳ್ಳುವ ಶಕ್ತಿ ಹೊಂದಿದ್ದು, ಆಕ್ಸಿಜೆನ್ ಇಲ್ಲದೆ ಮನುಷ್ಯನ ದೇಹ ಬದುಕಿ ಉಳಿಯಲು ಆಗುವುದಿಲ್ಲ. ಹೀಗಿದ್ದಾಗ ಬೆಂಗಳೂರಿನ ವಾತಾವರಣ ಮಾಲಿನ್ಯ ಪರಿಣಾಮ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ಆರೋಗ್ಯ ಕಾಪಾಡಿಕೊಂಡು ದುಡಿಯುವುದೇ ಸವಾಲಾಗಿ ಪರಿಣಮಿಸಿದೆ. ಇಂತಹ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಶುದ್ಧವಾದ & ಪ್ಯೂರ್ ಆಕ್ಸಿಜೆನ್ ನೀಡಲು ಲ್ಯಾಬ್‌ಗಳು ಶುರುವಾಗಿವೆ. ಇಲ್ಲಿ ನಿಮಗೆ ಸುಮಾರು 4,000 ರೂಪಾಯಿ ತನಕ ಹಣ ವ್ಯಯಿಸಿ ಶುದ್ಧ ಗಾಳಿ ಪಡೆಯಬಹುದಾಗಿದೆ. ಬೆಂಗಳೂರಿನಲ್ಲಿ ಈ ರೀತಿಯ ಶುದ್ಧವಾದ ಗಾಳಿ ನೀಡುವ ಚಿಕಿತ್ಸಾಲಯಗಳು ಟ್ರೆಂಡ್ ಆಗುತ್ತಿವೆ.
ದುಡ್ಡು ಕೊಟ್ಟು ಗಾಳಿ ಪಡೆಯುವವರು ಯಾರು?
ಬೆಂಗಳೂರಲ್ಲಿ ಇದ್ದು ಆರೋಗ್ಯ ಸರಿ ಇಲ್ಲದೇ ಇರುವವರು ಹಾಗೂ ಈಗಿನ್ನೂ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುವ ರೋಗಿಗಳು ಇದೀಗ ಆಕ್ಸಿಜೆನ್ ಚಿಕಿತ್ಸಾಲಯಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆ ನಿದ್ದೆ ಸುಧಾರಣೆಗೆ ಹಾಗೂ ವಯಸ್ಸಾಗುವ ವೇಗ ಕಡಿಮೆ ಮಾಡಲು, ಶುದ್ಧ ಗಾಳಿ ಬೇಕು ಎಂದು ಆಕ್ಸಿಜೆನ್ ಕ್ಲಿನಿಕ್‌ಗಳಿಗೆ ಹೋಗುವವರು ಕೂಡ ಇದ್ದಾರೆ. ಈ ಚಿಕಿತ್ಸೆಯನ್ನ ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಎಂದು ಕರೆಯಲಾಗುತ್ತದೆ. ಸಾಮಾನ್ಯ ವಾತಾವರಣದ ಆಕ್ಸಿಜೆನ್ ಮಟ್ಟಕ್ಕಿಂತಲೂ ಇಲ್ಲಿ 1.5 ರಿಂದ 3 ಪಟ್ಟು ಹೆಚ್ಚು ಆಕ್ಸಿಜೆನ್ ಸಿಗಲಿದೆ.
ಆರೋಗ್ಯ ಸಮಸ್ಯೆ ಇದ್ದರೆ ಚಿಕಿತ್ಸೆ ಇಲ್ಲ
ಗಾಯ ಗುಣಪಡಿಸಲು, ಸೋಂಕು ವಿರುದ್ಧ ಹೋರಾಡಲು, ವಿಕಿರಣ ಗಾಯಗಳಿಗೆ ಚಿಕಿತ್ಸೆ ನೀಡಲು, ಕಾರ್ಬನ್ ಮಾನಾಕ್ಸೈಡ್ ವಿಷ ಎದುರಿಸಲು & ಮೆದುಳಿನ ಚಿಕಿತ್ಸೆಗೆ ವೈದ್ಯರು ಶುದ್ಧ ಆಕ್ಸಿಜೆನ್ ಬಳಕೆ ಮಾಡುತ್ತಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ಪರಿಣಾಮ ಜನರು ತಾವೇ ನೇರವಾಗಿ ಆಕ್ಸಿಜೆನ್ ಕ್ಲಿನಿಕ್‌ಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಿಲಿಕಾನ್ ಸಿಟಿಯ ಜನರು ನಾನಾ ತಂತ್ರ ಮಾಡುತ್ತಿದ್ದಾರೆ.
ಆದರೆ ಹೀಗೆ ಆಕ್ಸಿಜೆನ್ ಪಡೆಯುವ ಮೊದಲು ವೈದ್ಯರಿಂದ ಸಲಹೆ ಪಡೆಯಬೇಕಾಗುತ್ತೆ, ಅದರಲ್ಲೂ ಗರ್ಭಿಣಿಯರು & ಶ್ವಾಸಕೋಶ ಸಮಸ್ಯೆ ಇರುವವರು, ಕ್ಯಾನ್ಸರ್ ರೋಗಿಗಳು, ಜ್ವರ, ಕಿವಿ ನೋವು ಸೇರಿ ಇತ್ಯಾದಿ ಆರೋಗ್ಯ ಸಮಸ್ಯೆ ಇರುವವರಿಗೆ ಈ ಚಿಕಿತ್ಸೆ ನೇರವಾಗಿ ನೀಡಲಾಗುವುದಿಲ್ಲ. ಹಾಗೇ ಚಿಕಿತ್ಸೆ ಪಡೆಯುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಪಾಲನೆ ಮಾಡಬೇಕಾಗುತ್ತದೆ. ಈಗಾಗಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಈ ರೀತಿಯ ಆಕ್ಸಿಜೆನ್ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ.












Click it and Unblock the Notifications