Empty Site Owner: ಬಿಬಿಎಂಪಿ ವ್ಯಾಪ್ತಿಯ ಖಾಲಿ ನಿವೇಶನ ಮಾಲೀಕರೇ ದಂಡ ಕಟ್ಟಲು ಸಿದ್ಧರಾಗಿ, ಏಕೆ?
ಬೆಂಗಳೂರು, ಆಗಸ್ಟ್ 05: ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ, ವಾಹನ ದಟ್ಟಣೆ, ಕಸ ವಿಲೇವಾರಿಯಂತ ಸಮಸ್ಯೆಗಳು, ಭೂ, ಕೆರೆ ಮತ್ತು ಕಾಲುವೆ ಒತ್ತುವರಿದಾರರ ಮೇಲೆ ಕಣ್ಣಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಮನೆ ಕಟ್ಟದೇ ಸೈಟ್ ಖರೀದಿ ಮಾಡಿ ಹಾಗೆಯೇ ಬಿಟ್ಟಿರುವ ಖಾಲಿ ನಿವೇಶನಗಳ ಮೇಲೆ ಕಣ್ಣಿಟ್ಟಿದೆ.
ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡದೆ, ಖಾಲಿ ನಿವೇಶನಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಸೈಟ್‌ಗಳನ್ನು ಗುರುತಿಸಿ ಮಾಲೀಕರಿಗೆ ನೋಟೀಸ್ ನೀಡಿ ದಂಡ ವಿಧಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಕುರಿತು ಸೋಮವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಬಿಬಿಎಂಪಿಯ ಆಯಾ ವಲಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಗುರುತಿಸಿ ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಬೇಕು.
ನಂತರ ಯಾವ ಖಾಲಿ ಸೈಟ್‌ಗಳಲ್ಲಿ ಸ್ವಚ್ಛತೆ ಕಾಪಾಡದೇ ಬೇಕಾಬಿಟ್ಟಿ ಬಿಟ್ಟಿರುತ್ತಾರೋ ಅಂತಹ ನಿವೇಶನಗಳ ಮಾಲೀಕರಿಗೆ ನೋಟೀಸ್ ನೀಡಬೇಕು. ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡಿ ದಂಡ ವಿಧಿಸಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.
ಇನ್ನೂ ನೀವು ಪಟ್ಟಿ ಮಾಡುವ ಖಾಲಿ ನಿವೇಶನಗಳು ಇಲ್ಲವೇ ಪ್ರದೇಶಗಳು ಆಯಾ ಪಾಲಿಕೆ ಆಸ್ತಿ ತೆರಿಗೆ ವ್ಯಾಪ್ತಿಗೆ ವ್ಯಾಪ್ತಿಗೆ ಬಂದಿವೆಯೇ ಇಲ್ಲವೇ ಎಂದು ಪರಿಶೀಲಿಸಬೇಕು. ಆಸ್ತಿ ತೆರಿಗೆ ವ್ಯಾಪ್ತಿಗೆ ಬರದಿದ್ದಲ್ಲಿ ಕೂಡಲೇ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಸೂಕ್ತ ಕ್ರಮ ಜರುಗಿಸುವಂತೆ ಅವರು ನಿರ್ದೇಶಿಸಿದರು.
ತ್ವರಿತವಾಗಿ ವೈಟ್ ಟಾಪಿಂಗ್ ಕಾಮಗಾರಿ ಆರಂಭ
ಬೆಂಗಳೂರಿನಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಹೊಸದಾಗಿ ಕೈಗೆತ್ತಿಕೊಂಡ ವೈಟ್ ಟಾಪಿಂಗ್ ಕಾಮಗಾರಿ ಯೋಜನೆಗಳು ತ್ವರಿತಗತಿಯಲ್ಲಿ ಕೆಲಸ ಆರಂಭಿಸಬೇಕು. ಇದಕ್ಕಾಗಿ ತಾವು ಸಂಚಾರಿ ಪೊಲೀಸ್ ಇಲಾಖೆ ಸಹಯೋಗ ಪಡೆದು, ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.

ಅನಧಿಕೃತ ಜಾಹೀರಾತು ಹಾಕುವವರ ಮೇಲೆ ಸೂಕ್ತ ಕ್ರಮ
ನಗರದ ಅಂದಗೆಡಿಸುವ ಅನಧಿಕೃತ ಜಾಹೀರಾತು, ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಬೇಕು. ಆದ್ದರಿಂದ ಆಯಾ ವಲಯ ವ್ಯಾಪ್ತಿಯಲ್ಲಿರುವ ಮುದ್ರಣಾಲಯಗಳಿಗೆ ನೋಟೀಸ್ ನೀಡಿ ಯಾವುದೇ ಅನಧಿಕೃತ ಜಾಹೀರಾತು ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳಿ. ನಿಯಮ ಉಲ್ಲಂಘಣೆ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು.
ವಿದ್ಯುತ್ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 5 ರಿಂದ ರಾತ್ರಿ 8.30 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕಿದೆ. ಈ ಮೂಲಕ ನಾಗರಿಕರಿಂದ ಯಾವುದೇ ದೂರುಗಳು ಕೇಳಿ ಬರದಂತೆ ಬೀದಿ ದೀಪಗಳು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲದ ಕಡೆ ಬೀದಿ ದೀಪ ಅಳವಡಿಕೆ ಮಾಡಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನಿಯಂತ್ರಣ ಮಾಡಬೇಕು ಎಂದರು.
ಸಭೆಯಲ್ಲಿ ವಿಶೇಷ ಆಯುಕ್ತರುಗಳಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರುಗಳಾದ ರಮೇಶ್, ಶಿವಾನಂದ್ ಕಪಾಶಿ, ಕರೀಗೌಡ, ರಮ್ಯಾ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications