KIADB: ಅಧಿಸೂಚಿತ ಜಾಗದಲ್ಲಿ ರಾತ್ರೋ ರಾತ್ರಿ ಅಕ್ರಮ ಗಿಡಮರ: ಕೋಟಿಗಟ್ಟಲೇ ಹಣ ಹೊಡೆಯಲು ಅಧಿಕಾರಿಗಳ ಪ್ಲಾನ್?
ಬೆಂಗಳೂರು, ಮೇ 22: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಕ್ರಮಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದೀಗ ಕೈಗಾರಿಕೆ ಉದ್ದೇಶಕ್ಕಾಗಿ ರೈತರಿಂದ ಸರ್ಕಾರ ಭೂಮಿ ಖರೀಸುತ್ತದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದರೂ ಹೆಚ್ಚಿನ ಹಣ ಹೊಡೆಯಲು ಆ ಜಾಗದಲ್ಲಿ ರಾತ್ರೋ ರಾತ್ರಿ ಲಕ್ಷಾಂತರ ಸಸಿ ನೆಡಲಾಗಿದೆ.
ಈ ಮೂಲಕ ಸರ್ಕಾರ ಗುರುತಿಸಿ, ಅಧಿಸೂಚನೆ ಹೊರಡಿಸಿರುವ ಜಾಗದಿಂದ ಹೆಚ್ಚಿನ ಹಣ ಲಪಟಾಯಿಸಲು ಮಂಡಳಿ ಅಧಿಕಾರಿಗಳು ಬ್ರೋಕರ್ ಗಳ ಜತೆ ಪ್ಲಾನ್ ಮಾಡಿರುವುದು ಬಹಿರಂಗವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ KIADB ಸಿಇಓ ಅವರು ಇಂತಹ ಪ್ರಕರಣಗಳಿಗೆ ವಿಶೇಷ ಭೂಸ್ವಾಧೀನಾಧಿಕಾರಿಯೇ ಹೊಣೆ ಎಂದು ಹೇಳಿದ್ದಾರೆ.

ಹೆಚ್ಚಿನ ಹಣಕ್ಕಾಗಿ ಸಸಿ ನೆಟ್ಟ ಆರೋಪ
ನೆಲಮಂಗಲ ತಾಲ್ಲೂಕಿನ ಹನುಮಂತಪುರ, ಬಿದ್ಲೂರು, ಕೋಡಿಪಾಳ್ಯ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯು (ಕೆಐಎಡಿಬಿ) ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಜಮೀನಿನಲ್ಲಿ ಕೆಲವರು ಹೆಚ್ಚಿನ ಪರಿಹಾರ ಪಡೆಯಲೆಂದೇ ಗಿಡಮರಗಳನ್ನು ನೆಟ್ಟಿರುವ ಆರೋಪ ಕೇಳಿ ಬಂದಿದೆ.
ಈ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸಂಸ್ಥೆಯ ಸಿಇಒ ಡಾ.ಎಂ.ಮಹೇಶ ಅವರು ವಿಶೇಷ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ ಜಮೀನುಗಳಲ್ಲಿ ಇರುವ ಗಿಡಮರಗಳು ಮತ್ತು ಕಟ್ಟಡಗಳಿಗೆ ಮಾತ್ರ ಪರಿಹಾರ ಕೊಡುವ ನಿಯಮ ಇದೆ.
ಪ್ರಕರಣದ ತನಿಖಾ ತಂಡದಲ್ಲಿ ಮುಖ್ಯ ಎಂಜಿನಿಯರ್
ಆದರೆ ಅಧಿಸೂಚನೆ ಹೊರಡಿಸಿರುವ ಖಾಲಿ ಜಮೀನುಗಳಿಂದ ವಿಪರೀತ ಪರಿಹಾರ ದಕ್ಕಿಸಿಕೊಳ್ಳಲೆಂದೇ ಕೆಲವರು ಬೇರೆಡೆ ಬೆಳೆದು ನಿಂತಿರುವ ಬಲಿತ ಗಿಡಮರಗಳನ್ನು ತಂದು ನೆಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಲಕ್ಷಾಂತರ ಸಸಿಗಳನ್ನು, ಅವು ಹಣ್ಣಿನ ಸಸಿಗಳನ್ನು ತಂದು ನೆಡಲಾಗಿದೆ.
ಈ ಸಂಬಂಧ ತನಿಖೆಗೆ ಆದೇಶ ಮಾಡಿದ್ದು, ತನಿಖಾ ತಂಡದಲ್ಲಿ ಕೆಐಎಡಿಬಿ ಮುಖ್ಯ ಎಂಜಿನಿಯರ್ ಕೂಡ ಇರಲಿದ್ದಾರೆ ಎಂದು KIADB ಸಿಇಒ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಥವಾ ಇಸ್ರೋದ ಸ್ಯಾಟಲೈಟ್ ಮ್ಯಾಪಿಂಗ್ ಆಧರಿಸಿಯೇ ಅಧಿಸೂಚಿತ ಜಮೀನುಗಳಿಗೆ ಪರಿಹಾರ ವಿತರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಅದಿಸೂಚನೆ ಹೊರಡಿಸಿದ ನಂತರ ಹೆಚ್ವಿನ ಪರಿಹಾರಕ್ಕಾಗಿ ಗಿಡ/ಮರ ತಂದು ನೆಡುವುದರ ಮೂಲಕ ಸಂಸ್ಥೆಗೆ ನಷ್ಟ ಉಂಟು ಮಾಡಿದರೆ ಅದಕ್ಕೆ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಅಧಿಕಾರಿಗಳನ್ನು ಹೊಣೆ ಮಾಡುವುದರ ಜೊತೆಗೆ ಹಾಗೆಯೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಹೇಶ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications