ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋ 'ನೀಲಿ' ಮಾರ್ಗದ ಅಪ್‌ಡೇಟ್
ಬೆಂಗಳೂರು, ಆಗಸ್ಟ್ 16: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ನಗರದಲ್ಲಿ ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ರೈಲುಗಳು ಸಂಚಾರ ನಡೆಸುತ್ತಿವೆ. ಹಳದಿ, ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಹೊಸ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ನಮ್ಮ ಮೆಟ್ರೋ 'ನೀಲಿ' ಮಾರ್ಗದ ಕುರಿತು ಅಪ್‌ಡೇಟ್ ನೀಡಿದ್ದಾರೆ. ಈ ಮಾರ್ಗ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸಲಿದ್ದು, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಭರವಸೆ ಮೂಡಿಸಿದೆ.

ಶಾಸಕಿ ಫೇಸ್‌ಬುಕ್ ಪುಟದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳ ನಿರ್ಮಾಣದಲ್ಲಿ ಆಗಬಹುದಾಗಿದ್ದ ವಿಳಂಬವನ್ನು ತಪ್ಪಿಸಲು ಪ್ರಿಕಾಸ್ಟ್ ಘಟಕಗಳನ್ನು ಬಳಸಿಕೊಂಡು ಲಿಗೋ ಇಟ್ಟಿಗೆ ಶೈಲಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶಾಸಕಿ ಫೇಸ್‌ಬುಕ್ ಪೋಸ್ಟ್; ಹೊರ ವರ್ತುಲ ರಸ್ತೆ (ORR) ಮೆಟ್ರೋ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು ವೇಗವನ್ನು ಪಡೆದುಕೊಂಡಿದ್ದು, ಬಹಳಷ್ಟು ಕೆಲಸಗಳು 24*7 ನಡೆಯುತ್ತಿವೆ. ಸಂಚಾರ ದಟ್ಟಣೆಯ ಮೇಲೆ ಪರಿಣಾಮ ಬೀರುವುದನ್ನು ಕಡಿಮೆ ಮಾಡಲು ನಿರ್ಮಾಣ ಚಟುವಟಿಕೆಗಳನ್ನು ರಾತ್ರಿಹೊತ್ತು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮೆಟ್ರೋ ನಿರ್ಮಾಣ ಕಾಮಗಾರಿಗಳ ವೇಗ ಹೆಚ್ಚಿಸಲು ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡ ಬಿಎಂಆರ್‌ಸಿಎಲ್, AFCONS ಮತ್ತು SNC ತಂಡಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಪ್ರತಿ ದಿನ ರಸ್ತೆಗಳ ಮೇಲೆ ಸಂಚಾರ ದಟ್ಟಣೆ ಸಮಸ್ಯೆಗಳನ್ನು ನಿರ್ವಹಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ವಿವಿಧ ಟ್ರಾಫಿಕ್ ಪೊಲೀಸ್ ಠಾಣೆಗಳ BTP ತಂಡಗಳ ಶ್ರಮವನ್ನೂ ನಾನು ಪ್ರಶಂಸಿಸುತ್ತೇನೆ ಎಂದು ತಿಳಿಸಿದ್ದಾರೆ.
ನೀಲಿ ಮಾರ್ಗದ ಕುರಿತು; ನಮ್ಮ ಮೆಟ್ರೋ ಯೋಜನೆಯ 2ನೇ ಹಂತದಲ್ಲಿ ಬರುವ 'ನೀಲಿ' ಮಾರ್ಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮಹತ್ವದ ಮಾರ್ಗವಾಗಿದೆ. 2025ರ ವೇಳೆಗೆ ಈ ಮಾರ್ಗದಲ್ಲಿ ಸಂಪೂರ್ಣವಾಗಿ ಮೆಟ್ರೋ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಗುರಿ ಹಾಕಿಕೊಂಡಿದೆ.
ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಈ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಹೊರ ವರ್ತುಲ ನಮ್ಮ ಮೆಟ್ರೋ ಯೋಜನೆಯಲ್ಲಿ ಬಿಎಂಆರ್‌ಸಿಎಲ್ ಐಟಿ ಕಂಪನಿಗಳಿಗೆ ಮೆಟ್ರೋ ನಿಲ್ದಾಣದಿಂದ ನೇರ ಸಂಪರ್ಕ ಕಲ್ಪಿಸಲು ವಾಕ್ ವೇ ನಿರ್ಮಾಣ ಮಾಡುತ್ತಿದೆ. ಕೆಲವು ನಿಲ್ದಾಣಗಳ ನಿರ್ಮಾಣಕ್ಕೆ ಐಟಿ ಕಂಪನಿಗಳು ಅನುದಾನ ನೀಡಿವೆ.
ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಮಾರ್ಗವನ್ನು 2ಬಿ ಹಂತದ ಈ ಮಾರ್ಗ ಎಂದು ಕರೆಯಲಾಗುತ್ತದೆ. ಎಂ. ಜಿ. ರಸ್ತೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಸಂಪರ್ಕಿಸುತ್ತದೆ. ಸುಮಾರು 10,584 ಕೋಟಿ ರೂಪಾಯಿಗಳ ಈ ಯೋಜನೆಯ ಈ ಮಾರ್ಗ ಹೊರ ವರ್ತುಲ ರಸ್ತೆ ಮೂಲಕ ಹಾದು ಹೋಗುತ್ತದೆ.
ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ 2023ರ ಅಂತ್ಯದ ವೇಳೆಗೆ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ರೈಲು ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು. ಕೃಷ್ಣರಾಜಪುರ (ಕೆಆರ್ ಪುರ) ದಿಂದ ಪ್ರಾರಂಭವಾಗುವ 39 ಕಿ. ಮೀ. ಉದ್ದದ ಕಾರಿಡಾರ್ ಅನ್ನು ಮೆಟ್ರೋ ಹಂತ 2ಬಿ ಯೋಜನೆಯಡಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೊದಲು ನಾಗವಾರ, ಹೆಬ್ಬಾಳ ಮತ್ತು ಜಕ್ಕೂರು ಮೂಲಕ ಸಾಗುತ್ತದೆ.












Click it and Unblock the Notifications