ಬೆಂಗಳೂರಿನ ಕಂಬಳದ ಸುತ್ತ ವಿವಾದ: ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಹೆಸರು ಕೈಬಿಟ್ಟ ಸಂಘಟಕರು!
ಬೆಂಗಳೂರು ನವೆಂಬರ್ 22: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ಹೆಸರನ್ನು ಕಂಬಳ ಸಂಘಟಕರು ಅತಿಥಿ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದ್ದಾರೆ. ನವೆಂಬರ್ 25 ಹಾಗೂ 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಅವರು ಆಗಮಿಸಬೇಕಾಗಿತ್ತು. ಆದರೆ ಸಾಕಷ್ಟು ವಿರೋಧಗಳ ನಡುವೆ ಅವರ ಹೆಸರನ್ನು ಆಮಂತ್ರಣದಿಂದ ಕೈಬಿಡಲಾಗಿದೆ.
ಬೆಂಗಳೂರು ಕಂಬಳದ ಭಾನುವಾರದ ಸಭಾ ಕಾರ್ಯಕ್ರಮಕ್ಕೆ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನ ಮಾಡಲಾಗಿತ್ತು. ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಬ್ರಿಜ್ ಭೂಷಣ್ ಅವರು ಉತ್ತರ ಪ್ರದೇಶದ ಕೈಸರ್ ಗಂಜ್ ಕ್ಷೇತ್ರದ ಬಿಜೆಪಿ ಸಂಸದ. ಸದ್ಯ ಅವರು ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಕ್ರೀಡಾಪಟುಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ದೇಶದಾದ್ಯಂತ ಸದ್ದು ಕೂಡ ಮಾಡಿತ್ತು. ಹೀಗಾಗಿ ಬ್ರಿಜ್ ಭೂಷಣ್ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಆಹ್ವಾನ ನೀಡಬಾರದು ಎನ್ನುವ ಒತ್ತಾಯ ಹೇರಲಾಗಿತ್ತು. ಇದರ ಬೆನ್ನಲ್ಲೆ ಸಂಘಟಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ನವೆಂಬರ್ 25ರಂದು ಬೆಂಗಳೂರಿಗೆ ಆಗಮಿಸಲಿರುವ ಬ್ರಿಜ್ ಭೂಷಣ್, ಸ್ಥಳೀಯ ಕುಸ್ತಿಪಟುಗಳನ್ನು ಗೌರವಿಸಬೇಕಾಗಿತ್ತು. ಕರ್ನಾಟಕದ ಕುಸ್ತಿಪಟುಗಳು ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೋಟದಲ್ಲಿ ಗೆದ್ದಿದ್ದಾರೆ. ಈ ಹಿನ್ನಲೆಯಲ್ಲಿ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಅಭಿನಂದಿಸಬೇಕಿತ್ತು.
ಇದಕ್ಕಾಗಿ ಸಿದ್ದಿ ಸಮುದಾಯದ ಮನವಿ ಮೇರೆಗೆ ಬ್ರಿಜ್ ಭೂಷಣ್ ಅವರಿಗೆ ಆಮಂತ್ರಣ ಪತ್ರಿಕೆ ಕೂಡ ಕಳುಹಿಸಲಾಗಿತ್ತು. ಆದರೆ ಈ ಆಹ್ವಾನಕ್ಕೆ ತಾವು ಆಗಮಿಸುವ ಬಗ್ಗೆ ಬ್ರಿಜ್ ಭೂಷಣ್ ಖಚಿತಪಡಿಸಿರಲಿಲ್ಲ.
ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಒತ್ತಡಗಳ ನಡುವೆ ಆಮಂತ್ರಣ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರನ್ನು ಕೈಬಿಡಲು ಸಂಘಟನಾ ಸಮಿತಿಯು ನಿರ್ಧರಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಶಾಸಕ ಹಾಗೂ ಬೆಂಗಳೂರು ಕಂಬಳ ಸಂಘಟನಾ ಸಮಿತಿ ಅಧ್ಯಕ್ಷ ಅಶೋಕ್ ರೈ, "ಕಂಬಳ ಒಂದು ಕ್ರೀಡೆಯಾಗಿದೆ. ಆಮಂತ್ರಣ ಪತ್ರಿಕೆ ನೋಡಿ ಹಲವಾರು ಜನರು ನಮ್ಮನ್ನು ಭೇಟಿಯಾಗುತ್ತಿದ್ದಾರೆ ಮತ್ತು ಬ್ರಿಜ್ ಭೂಷಣ್ ಆಹ್ವಾನಿಸುವುದು ಬೇಡ ಎಂದು ಹಲವಾರು ವಿನಂತಿಗಳನ್ನು ಮಾಡುತ್ತಿದ್ದಾರೆ.
ಬ್ರಿಜ್ ಭೂಷಣ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಿದ್ದಿ ಸಮುದಾಯದ ಜನರು ನಮಗೆ ಮನವಿ ಮಾಡಿದ್ದರು. ಆದರೆ ಬ್ರಿಜ್ ಭೂಷಣ್ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಆಹ್ವಾನ ಪತ್ರಿಕೆಯಲ್ಲಿಅವರ ಹೆಸರು ಹಾಕಲಾಗಿತ್ತು. ಈಗ ಅದನ್ನು ಬಿಟ್ಟು ಹೊಸ ಆಮಂತ್ರಣ ಪತ್ರಿಕೆಯನ್ನು ನೀಡುತ್ತೇವೆ'' ಎಂದು ಅಶೋಕ್ ರೈ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಲವಾರು ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ನಂತರ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಿದ್ದಾರೆ.
ಬೆಂಗಳೂರು ಕಂಬಳ
ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಆಯೋಜಿಸುವ ಕಂಬಳ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 200 ಎಮ್ಮೆಗಳು ಭಾಗವಹಿಸಲಿವೆ. ಯಖಗಾನ, ಹುಲಿ ಕುಣಿತ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ದಿನವಿಡೀ ಆಯೋಜಿಸಲಾಗಿದೆ.
25 ಮತ್ತು 26 ರಂದು ಸಂಜೆ ಖ್ಯಾತ ಕಲಾವಿದರಾದ ಗುರುಕಿರಣ್ ಮತ್ತು ಅರ್ಜುನ್ ಜನ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರೋ ಕಂಬಳಕ್ಕೆ ಕರ್ನಾಟಕ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದೆ. ಕಂಬಳಕ್ಕೆ ಬಾಲಿವುಡ್ ತಾರೆಯರು ರಾಜಕೀಯ ಗಣ್ಯರನ್ನು ಸಹ ಆಹ್ವಾನಿಸಲಾಗಿದೆ.












Click it and Unblock the Notifications