ತಮಿಳುನಡಿನ ಹೊಸೂರುತನಕ ಮೆಟ್ರೋ ವಿಸ್ತರಣೆಗೆ ವಿರೋಧ: ನಗರ ವ್ಯಾಪ್ತಿಯಲ್ಲಿ ಮೊದಲು ಮೆಟ್ರೋ ವಿಸ್ತರಿಸಿ
ತಮಿಳುನಾಡಿನ ಹೊಸೂರು ತನಕ ನಮ್ಮ ಮೆಟ್ರೋ ವಿಸ್ತರಣೆಗೆ ವಿರೋಧ ವ್ಯಕ್ತವಾಗಿದೆ. ಮೊದಲು ಬೆಂಗಳೂರು ಹೊರವಲದ ಮಾಗಡಿ, ನೆಲಮಂಗಲ ಇನ್ನಿತರ ಕಡೆ ಮೆಟ್ರೋ ಮಾರ್ಗ ವಿಸ್ತರಣೆಗೆ ಒತ್ತಾಯ ಕೇಳಿ ಬಂದಿದೆ.
ಬೆಂಗಳೂರು, ಮಾರ್ಚ್ 03: ನೆರೆ ರಾಜ್ಯ ತಮಿಳುನಾಡಿನ ಹೊಸೂರು ತನಕ ನಮ್ಮ ಮೆಟ್ರೋ ವಿಸ್ತರಣೆ ಯೋಜನೆ ವಿಚಾರ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೊಸೂರುವರೆಗೆ ಮೆಟ್ರೋ ವಿರೋಧ ವ್ಯಕ್ತವಾಗುವ ಜೊತೆಗೆ ಮೊದಲು ನಗರದ ವ್ಯಾಪ್ತಿ, ಹೊರ ವಲಯದ ವ್ಯಾಪ್ತಿಯಲ್ಲಿ ಮೆಟ್ರೋ ವಿಸ್ತರಣೆಗೆ ಆಗ್ರಹವು ಹೆಚ್ಚಾಗುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಹೊರ ವಲಯದಿಂದ ನಗರಕ್ಕೆ ಬರುವವರಿಗೆ ಮೆಟ್ರೋ ಲಭ್ಯವಿಲ್ಲ. ಹೀಗಿದ್ದರೂ ಹೊಸೂರು ವರೆಗೆ ಮೆಟ್ರೋ ವಿಸ್ತರಣೆ ಮಾಡುವುದು ಸರಿಯಲ್ಲಿ ಮೊದಲು ಬೆಂಗಳೂರು ಗ್ರಾಮಾಂತರ, ನೆಲಮಂಗಲದಂತ ಪ್ರದೇಶಗಳಿಗೆ ಮೆಟ್ರೋ ಸೌಲಭ್ಯ ಕಲ್ಪಿಸಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚೆಗೆ ಚೆನ್ನೈ ಮೆಟ್ರೋ ರೈಲು ನಿಗಮ (ಸಿಎಂಆರ್‌ಎಲ್) ಸಲ್ಲಿಸಿದ್ದ ಬೊಮ್ಮಸಂದ್ರ-ಹೊಸೂರು ಸಂಪರ್ಕಿಸುವ ಮೆಟ್ರೋ ಮಾರ್ಗ ಕಾಮಗಾರಿ ಕಾರ್ಯಸಾಧ್ಯತೆ ವರದಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇದು ಈಗ ಹಲವು ಹೊಸೂರು ವಿಸ್ತರಣೆಯ ವಿರೋಧಗಳಿಗೆ ಕಾರಣವಾಗಿದೆ.
ಸದ್ಯ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಗರದಲ್ಲಿ ನಾಲ್ಕನೇ ಹಂತದ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುತ್ತಿದೆ. ಈ ಯೋಜನೆಯಡಿ ಬೆಂಗಳೂರು ಸುತ್ತಮುತ್ತಲಿನ ಮಾಗಡಿ, ಬಿಡದಿಗೆ ಸಂಪರ್ಕ ಸಾಧ್ಯವಾಗುತ್ತದೆ. ಇದರ ಡಿಪಿಆರ್ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಬೇಕು. ಇನ್ನೂ ಕೆಲಸ ಆರಂಭಕ್ಕೆ 4-5 ವರ್ಷ ಹಿಡಿಯಬಹುದು ಎನ್ನಲಾಗಿದೆ. ಆದ್ದರಿಂದ ಮೊದಲ ಇಂತಹ ಯೋಜನೆಗಳಿಗೆ ಗಮನ ಹರಿಸಿ. ನಗರದ ಸುತ್ತಮುತ್ತಲಿನ ಜನರಿಗೆ ನೆರವಾಗುವಂತೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಗೆ ಆದ್ಯತೆ ನೀಡಿ ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ, ಹೊಕೋಟೆಗೆ ಮೆಟ್ರೋ ಅಗತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಜನತೆಗೆ ನಗರಕ್ಕೆ ಬರಲು ಮೆಟ್ರೋ ಅಗತ್ಯತೆ ಇದ್ದು, ಮೊದಲು ಇಲ್ಲಿಗೆ ಮೆಟ್ರೋ ಸಂಪರ್ಕ ಕಲ್ಪಿಸಬೇಕಿದೆ. ಈ ಭಾಗದಲ್ಲಿ ಇಲ್ಲಿ ನಿವೇಶನ ಖರೀದಿ ತೀರಾ ದುಬಾರಿಯಲ್ಲದ ಕಾರಣ ನಗರದಲ್ಲಿ ಉದ್ಯೋಗ ಮಾಡುವವರು ನೆಲಮಂಗಲ ಇತರೆಡೆ ವಾಸಿಸುತ್ತಿದ್ದಾರೆ. ಅವರು ಮೆಜೆಸ್ಟಿಕ್, ಜಯನಗರ, ಮಾನ್ಯತಾ ಟೆಕ್‌ಪಾರ್ಕ್, ಕೋರಮಂಗಲ ಹೀಗೆ ವಿವಿಧೆಡೆ ಬರಲು ಕಷ್ಟುಪಡುತ್ತಿದ್ದಾರೆ. ನೆಲಮಂಗಲದ ನಿವಾಸಿಗಳು ಮೆಟ್ರೋ ಏರಲು ನಾಗಸಂದ್ರದವರೆಗೆ ತೆರಳಬೇಕಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಇನ್ನೂ ನಾಗಾವರ-ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದು ದೇವನಹಳ್ಳಿ ಜನರಿಗೆ ಲಭ್ಯವಾಗುತ್ತದೆ. ಬೆಂಗಳೂರು ಗ್ರಾಮಾಂತರಕ್ಕೆ ಹೆಚ್ಚು ಸಂಪರ್ಕ ಸಾಧ್ಯವಾಗಿಲ್ಲ. ಅಲ್ಲಿಂದ ಬರುವವರು ಹೆಬ್ಬಾಳ, ಮೇಖ್ರಿ ವೃತ್ತ, ಪ್ಯಾಲೇಸ್ ಗುಟ್ಟಹಳ್ಳಿ ಟ್ರಾಫಿಕ್, ಕೆ.ಆರ್.ಪುರಂ, ಗೊರಗುಂಟೆ ಪಾಳ್ಯ ಮೂಲಕ ಸಾಕಷ್ಟು ಟ್ರಾಫಿಕ್ ಕಿರಿಕಿರಿ ಅನುಭವಿಸಿ ಬರಬೇಕಿದೆ. ದೊಡ್ಡಬಳ್ಳಾಪುರ ಮಾರ್ಗದಲ್ಲಿ ಯಲಹಂಕದವರೆಗೆ, ಅದೇ ರೀತಿ ಹೊಸಕೋಟೆ ಬೈಯ್ಯಪ್ಪನಹಳ್ಳಿಯಿಂದ ಮುಂದುವರಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ.
ಸದ್ಯದ ನಮ್ಮ ಮೆಟ್ರೋ ಯೋಜನೆ, ಮಾರ್ಗಗಳು ಇವು
ಬೆಂಗಳೂರಿನಲ್ಲಿ ಸದ್ಯಕ್ಕೆ ಮೆಟ್ರೋದ 2ನೇ ಹಂತದ ಕಾಮಗಾರಿ ಚಾಲನೆಯಲ್ಲಿದೆ. ಇದೇ ವರ್ಷ ಹೊಸದಾಗಿ ಒಟ್ಟು ಸುಮಾರು 40 ಕಿ.ಮೀ. ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ. ಇನ್ನೂ ಮುಂದಿನ ವರ್ಷ (2024)ದಲ್ಲಿ ಎರಡನೇ ಹಂತದ ಎಲ್ಲ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ. ಇತ್ತೀಚಗಷ್ಟೇ 3ನೇ ಹಂತದ16,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗೆ ಅನುಮೋದನೆ ಸಿಗಬೇಕಿದೆ.
BMRCL ಪ್ರಕಾರ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ ಸಂಪರ್ಕಿಸುವ 31 ಕಿ.ಮೀ. ಮಾರ್ಗ (ಹಂತ-3ಎ), ಹೊಸಹಳ್ಳಿಯಿಂದ ಕಡಬಗೆರೆಗೆ 12 ಕಿ.ಮೀ. ಮಾರ್ಗಗಳಿಗೆ ಡಿಪಿಆರ್ ಸಿದ್ಧವಾಗಿದೆ. 17 ಕಿ.ಮೀ. ಸುರಂಗದ ಮೂಲಕ ಸಾಗಲಿರುವ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಒಟ್ಟಾರೆ 37 ಕಿ.ಮೀ. ಮಾರ್ಗವು (ಹಂತ-3ಬಿ) ಸುರಂಗ ಮಾರ್ಗದಲ್ಲಿ 17 ಕಿ.ಮೀ. ಸಾಗುತ್ತದೆ. ಇಬ್ಲೂರು, ಕೋರಮಂಗಲ, ಕಾವೇರಿ ಥಿಯೇಟರ್ ಮೂಲಕ ಹಾದು ಹೋಗಲಿದೆ ಎಂದು ಹೇಳಲಾಗಿದೆ.












Click it and Unblock the Notifications