ವಿರೋಧ ಪಕ್ಷಗಳ ಸಭೆ: ಈ ಮಾರ್ಗಗಳಲ್ಲಿ ಸಂಚಾರ ಬಂದ್: ಪರ್ಯಾಯ ಮಾರ್ಗಗಳ ಬಗ್ಗೆ ತಿಳಿಯಿರಿ
ಬೆಂಗಳೂರು, ಜುಲೈ 16: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ 24 ಪಕ್ಷಗಳು ಜುಲೈ 17ಮತ್ತು 18ರಂದು ಸೋಮವಾರ ಬೆಂಗಳೂರಿನಲ್ಲಿ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತಿವೆ. ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದು ಸಭೆ ಹಿನ್ನಲೆಯಲ್ಲಿ ಹಲವು ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಕೂಡ ನಡೆಯುವುದರಿಂದ ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಜ್ ವೆಸ್ಟೆಂಡ್ ಹೊಟೇಲ್ನಲ್ಲಿ ಲೋಕಸಭಾ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ಕೂಡ ನಿಷೇಧಿಸಲಾಗಿದೆ. ಆದ್ದರಿಂದ ಸೋಮವಾರ ವಾಹನ ಸವಾರರು ಬದಲೀ ಮಾರ್ಗಗಳಲ್ಲಿ ಚಲಿಸುವಂತೆ ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ನಗರದ ಕಬ್ಬನ್ ರಸ್ತೆ, ಪ್ಯಾಲೆಸ್ ರಸ್ತೆ, ಬಿಆರ್ ಅಂಬೇಡ್ಕರ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮಾತ್ರವಲ್ಲದೆ ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಸೋಮವಾರ ಈ ಮಾರ್ಗಗಳನ್ನು ಬಳಸುವ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಚಲಿಸುವಂತೆ ಕೋರಲಾಗಿದೆ.
ಈ ಬಾರಿ 24 ಪಕ್ಷಗಳು ಭಾಗಿ
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್, ಎನ್‌ಸಿಪಿ ಸೇರಿದಂತೆ ದೇಶದ 24 ಪಕ್ಷಗಳು ಒಗ್ಗಟ್ಟಾಗಲು ನಿರ್ಧರಿಸಿವೆ. ಈ ಸಂಬಂಧ ಚರ್ಚಿಸಲು ಜುಲೈ 17 ಮತ್ತು 18ರಂದಯ ಬೆಂಗಳೂರಿನಲ್ಲಿ ಸಭೆ ಸೇರಲಿವೆ. ಈಗಾಗಲೇ ಜೂನ್ ತಿಂಗಳಿನಲ್ಲಿ ಪಾಟ್ನಾದಲ್ಲಿ ಸಭೆ ನಡೆದಿತ್ತು, ಅಲ್ಲಿ 16 ಪಕ್ಷಗಳು ಭಾಗವಹಿಸದ್ದವು. ಈ ಬಾರಿ 24 ಪಕ್ಷಗಳ ನಾಯಕರು ಭಾಗವಹಿಸುತ್ತಿದ್ದಾರೆ, ಆಪ್, ಡಿಎಂಕೆ ಪಕ್ಷಗಳು ಕೂಡ ಈ ಸಭೆಯಲ್ಲಿ ಹಾಜರಾಗುತ್ತಿದ್ದು ಭಾರಿ ಕುತೂಹಲ ಕೆರಳಿಸಿದೆ.
ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಮತ್ತೆ ಸಭೆ ನಡೆಸುತ್ತಿವೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಎರಡನೇ ಸಭೆ ನಡೆಯಬೇಕಿತ್ತಾದರೂ ಅಂತಿಮ ಕ್ಷಣದಲ್ಲಿ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಈ ಸಭೆಯ ನೇತೃತ್ವ ವಹಿಸಲಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಭಾಗವಹಿಸಲಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಶಿವನೇನೆ (ಉದ್ದವ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಂಜಯ್ ರಾವತ್ ಇನ್ನಿತರರು ಭಾಗವಹಿಸುತ್ತಿರುವ ಪ್ರಮುಖರಾಗಿದ್ದಾರೆ.












Click it and Unblock the Notifications