"Karnataka Govt: ಎಲ್ಲಿದೆ ಸ್ವಾಮಿ ಉದ್ಯೋಗ ನೇಮಕಾತಿ ಗ್ಯಾರೆಂಟಿ? ಟ್ರೋಲ್ ಮಿನಿಸ್ಟರ್ ಬೇಕಿಲ್ಲ''
ಬೆಂಗಳೂರು, ಡಿಸೆಂಬರ್ 01: ಕರ್ನಾಟಕ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಸುದ್ದಿ ಮಾಡಿದೆ. ಇದು ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ ಬೀರಿದೆ. ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ರೈತರು ಬೆಳೆದ ಕಬ್ಬು, ಮೆಕ್ಕೆಜೋಳ ಸೂಕ್ತ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ ನಡೆದಿತ್ತು. ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡುವಂತೆ ಆಗ್ರಹಿಸಿದರು.

ಸರ್ಕಾರಿ ಹುದ್ದೆಗಳ ನೇಮಕಾತಿ ಆಗಿಲ್ಲ. ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ. ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಂಟಿ? ಎಲ್ಲಿದೆ ನೇಮಕಾತಿ ಭಾಗ್ಯ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸರ್ಕಾರಿ ನೇಮಕಾತಿ ವರ್ಷಗಳಿಂದ ಆಗಿಲ್ಲದ್ದನ್ನು ಖಂಡಿಸಿ ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆ ನಡೆದಿದೆ. ಆ ಕುರಿತ ವಿಡಿಯೋ ಅನ್ನು ಎಕ್ಸ್ ಪೋಸ್ಟ್ ಮಾಡಿ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ತಂತ್ರಜ್ಞಾನ ನವೋದ್ಯಮದಲ್ಲಿ ನಿರಾಸಕ್ತಿ: ಖರ್ಗೆ ವಿರುದ್ಧ ಕಿಡಿ
ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜಕೀಯ ಕುಚೋದ್ಯಮದಲ್ಲಿ ಭಾರಿ ಆಸಕ್ತಿ ಹೊಂದಿದ್ದು, ತಂತ್ರಜ್ಞಾನ ನವೋದ್ಯಮದಲ್ಲಿ ನಿರಾಸಕ್ತಿ ಹೊಂದಿದ್ದಾರೆ. ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ ಹೀಗಿದೆ ಎಂದು ಕಿಡಿ ಕಾರಿದರು.
ಸಚಿವರು ತಮಗೆ ಸಂಬಂಧಪಡದ ವಿಷಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು. ಆರ್ ಎಸ್ಎಸ್ ನಿಷೇಧದ ಹಠ, ಸಿಕ್ಕಸಿಕ್ಕವರ ಮೇಲೆ ರಾಜಕೀಯ ಕುಚೋದ್ಯ, ಇವುಗಳಲ್ಲೇ ಸದಾ ಕಾಲಹರಣ ಮಾಡುತ್ತಿದ್ದಾರೆ. ಸಚಿವರಿಗೆ ತಮ್ಮ ಕರ್ತವ್ಯದ ಅರಿವೂ ಇದ್ದಂತಿಲ್ಲ, ಆಸಕ್ತಿಯಂತೂ ಮೊದಲೇ ಇಲ್ಲ ಎಂದು ದೂರಿದರು.
ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಂಟಿ?
— R. Ashoka (@RAshokaBJP) December 1, 2025
ಎಲ್ಲಿದೆ ನೇಮಕಾತಿ ಭಾಗ್ಯ?
ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ @INCKarnataka ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ.
ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ… pic.twitter.com/XDwZTSzoTg
ಸ್ಟಾರ್ಟ್ ಅಪ್ ಹೂಡಿಕೆ ಶೇ. 40ರಷ್ಟು ಕುಸಿತ
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಾಸಕ್ತಿ, ನಿಷ್ಕ್ರಿಯತೆ ಪರಿಣಾಮವಾಗಿ ಇಂದು ನಮ್ಮ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ ಶೇಕಡಾ 40ರಷ್ಟು ಭಾರಿ ಕುಸಿತ ಕಂಡಿದೆ. ನವೋದ್ಯಮಗಳ ರಾಜಧಾನಿ ಎಂದು ಖ್ಯಾತಿ ಪಡೆದಿದ್ದ ಕರ್ನಾಟಕ ಮತ್ತು ಬೆಂಗಳೂರು ಇಂದು ಅನ್ಯರಾಜ್ಯಗಳ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.
ನಮ್ಮ ನಾಡಿನ ಯುವ ನವೋದ್ಯಮಿಗಳಿಗೆ, ಹೂಡಿಕೆದಾರರಿಗೆ ಅವರ ಭವಿಷ್ಯದ ಬಗ್ಗೆ ಚಿಂತಿಸುವ, ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆ ಬೆಳೆಸುವ ಒಬ್ಬ ಕ್ರಿಯಾಶೀಲ ಐಟಿ ಸಚಿವ ಬೇಕೇ ಹೊರತು ಸದಾ ರಾಜಕೀಯ ಕುಚೋದ್ಯಮದಲ್ಲೇ ಟೈಂ ಪಾಸ್ ಮಾಡುವ Troll ಮಿನಿಸ್ಟರ್ ಅಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಹಿಡಿದಿರುವ ಕರ್ನಾಟಕ ಕಾಂಗ್ರೆಸ್ ಎಂಬ ಗ್ರಹಣ ಬಿಡುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಲೇವಡಿ ಮಾಡಿದರು.












Click it and Unblock the Notifications