ಎಚ್ಎಸ್ಆರ್ ಲೇಔಟ್ ವಾಹನ ಮುಕ್ತ 'ಓಪನ್ ಸ್ಟ್ರೀಟ್'
ಬೆಂಗಳೂರು, ಸೆ. 13: ಎಚ್ಎಸ್ಆರ್ ಲೇಔಟ್ ಬಡಾವಣೆ ನಾಗರಿಕರು, ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಮನವಿಗೆ ಪುರಸ್ಕರಿಸಿರುವ ಕರ್ನಾಟಕ ಸರ್ಕಾರ ಸೆಪ್ಟೆಂಬರ್ 20 ರಂದು ಬಡಾವಣೆಯ ಎಲ್ಲಾ ರಸ್ತೆಗಳನ್ನು ಓಪನ್ ಸ್ಟ್ರೀಟ್ ಮಾಡುವುದಾಗಿ ಘೋಷಿಸಿದೆ.
ಸೆ.20ರಂದು ಸರ್ಕಾರಿ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆ ತನಕ ಖಾಸಗಿ ವಾಹನಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಎಚ್ ಎಸ್ ಆರ್ ಲೇಔಟ್ ನ ಎಲ್ಲಾ 7 ಸೆಕ್ಟರ್ ಗಳ ರಸ್ತೆಗಳು ಓಪನ್ ಸ್ಟ್ರೀಟ್ ಆಗಲಿವೆ. ಸಂಚಾರ ದಟ್ಟಣೆ, ವಾಯುಮಾಲಿನ್ಯ ನಿಯಂತ್ರಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಏಕ್ ರೂಪ್ ಕೌರ್ ಅವರು ಹೇಳಿದ್ದಾರೆ.

ಓಪನ್ ಸ್ಟ್ರೀಟ್ ಯೋಜನೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಂದು ಬಿಎಂಟಿಸಿ ಬಸ್ ಗಳು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಕೆ.ಆರ್ ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರ, ಜಯನಗರ ಸೇರಿದಂತೆ ಉಳಿದೆಡೆಗೆ ಬಸ್ ಗಳು ಸಂಚರಿಸಲಿವೆ. ಉಳಿದಂತೆ ಕಸದ ವಾಹನ, ಆಂಬುಲೆನ್ಸ್, ನೀರಿನ ಟ್ಯಾಂಕರ್ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಕಬ್ಬನ್ ಪಾರ್ಕ್ ನಲ್ಲಿ ಪ್ರತಿ ಭಾನುವಾರದಂದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಈಗ ಓಪನ್ ಸ್ಟ್ರೀಟ್ ಗೆ ಉತ್ತಮ ಪ್ರತಿಕ್ರಿಯೆ ಬಂದರೆ ಉಳಿದ ಬಡಾವಣೆಗಳಲ್ಲೂ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ. ಲಂಡನ್, ಕೇಪ್ ಟೌನ್ ಮುಂತಾದ ನಗರಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದರು.
ಈ ಯೋಜನೆಗೆ ಡಿಯುಎಲ್ ಟಿ, ಬಿಎಂಟಿಸಿ, ನಗರ ಟ್ರಾಫಿಕ್ ಪೊಲೀಸ್, ಬಿಎಂಆರ್ ಸಿಎಲ್, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬಿಬಿಎಂಪಿ ಇನ್ನಿತರ ಇಲಾಖೆ ಹಾಗೂ ಸಂಸ್ಥೆಗಳು ಕೈಜೋಡಿಸಿವೆ.
ಹೆಚ್ಚಿನ ಮಾಹಿತಿಗಳಿಗಾಗಿ
* ಓಪನ್ ಸ್ಟ್ರೀಟ್ಸ್ ಬೆಂಗಳೂರು ವೆಬ್ ಸೈಟ್
* ಅರ್ಬನ್ ಟ್ರಾನ್ಸ್ ಪೋರ್ಟ್ ವೆಬ್ ಸೈಟ್
* ಮೈಬಿಎಂಟಿಸಿ
* ಸೈಕಲ್ ಡೇ ಫೇಸ್ ಬುಕ್ ನೋಡಿ
(ಒನ್ ಇಂಡಿಯಾ ಸುದ್ದಿ)












Click it and Unblock the Notifications